ಬೆಂಗಳೂರು:ಭಾರಿ ಕುತೂಹಲ ಕೆರಳಿಸಿರುವ ಆರ್ಆರ್ ನಗರ ಚುನಾವಣಾ ಆಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಲಿದೆ. ಮತ ಎಣಿಕೆಗೆ ಚುನಾವಣೆ ಆಯೋಗ ಸಕಲ ಸಿದ್ದತೆ ನಡೆಸಿದ್ದು, ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಆರ್ಆರ್ ನಗರ ಚುನಾವಣೆ ಮತ ಎಣಿಕೆ ಸಿದ್ಧತೆಯ ಸಂಕ್ಷಿಪ್ತ ಮಾಹಿತಿ.... ನಗರದ ಜ್ಞಾನಾಕ್ಷಿ ವಿದ್ಯಾನಿಕೇತನ್ ಶಾಲೆಯಲ್ಲಿ ಮತ ಎಣಿಕೆಗೆ ಸಿದ್ದತೆ ನಡೆದಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗಲಿದೆ. ಮೂರು ಪಕ್ಷಗಳಿಗೆ ಪತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರದ ಮತದಾನದ ತೀರ್ಪು ನಾಳೆ ಮಧ್ಯಾಹ್ನದ ಒಳಗೆ ಹೊರಬೀಳಲಿದ್ದು, ಎಲ್ಲರೂ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
ಎಣಿಕೆ ಕಾರ್ಯಕ್ಕೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಎಣಿಕೆ ಕೇಂದ್ರದಲ್ಲಿ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು.
ಮೂರು ಹಂತದಲ್ಲಿ ಮತ ಎಣಿಕೆ ನಡೆಯಲಿದ್ದು, ಪ್ರತಿ ಟೇಬಲ್ ಗೆ ಮೈಕ್ರೋ ಅಬ್ಸರ್ವರ್, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಮತ ಎಣಿಕೆ ಏಜೆಂಟ್ ಗಳನ್ನು ಬೆಳಗ್ಗೆ 7 ಗಂಟೆಗೆ ಬರಲು ತಿಳಿಸಲಾಗಿದೆ. ಪಾಸ್ ಇದ್ದವರನ್ನು ಮಾತ್ರ ಮತ ಎಣಿಕೆ ಕೇಂದ್ರದ ಒಳಗೆ ಬಿಡಲಾಗುತ್ತದೆ.
ಎಣಿಕೆ ಕಾರ್ಯವು 4 ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿರುವ 28 ಎಣಿಕಾ ಟೇಬಲ್ ಗಳಲ್ಲಿ ನಡೆಯಲಿದೆ. ಹೆಚ್ಚುವರಿಯಾಗಿ 3 ಸಹಾಯಕ ಚುನಾವಣಾಧಿಕಾರಿಗಳನ್ನು ಎಣಿಕೆ ಕಾರ್ಯಕ್ಕಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಎಣಿಕೆ ಕಾರ್ಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 2 ಹಂತದ ತರಬೇತಿಯನ್ನು ನೀಡಲಾಗಿದೆ.
ನಾಳೆ ಬೆಳಿಗ್ಗೆ 7.45 ಕ್ಕೆ ಸ್ಟ್ರಾಂಗ್ ರೂಂ ತೆರೆದು 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಗಳ ಎಣಿಕೆ ಆರಂಭವಾಗಲಿದೆ. 8.30 ಕ್ಕೆ ಇವಿಎಂ ಎಣಿಕೆ ಪ್ರಾರಂಭವಾಗಲಿದೆ. 25 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಕೇಂದ್ರದಲ್ಲಿ ಒಟ್ಟು 4 ಹಂತದ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ರೀತಿಯ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿರ್ಭಂದ ಹೇರಲಾಗಿದ್ದು, ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ.
ಮತ ಎಣಿಕೆ ಕೇಂದ್ರದಲ್ಲಿ 1 ಡಿಸಿಪಿ, 4 ಎಸಿಪಿ, 20 ಪಿಐ, 48 ಪಿಐಸಿ, 76 ಎಎಸ್ಐ, 360 ಹೆಚ್ಸಿ/ಪಿಸಿ, 83 ಮಪ್ತಿ ಸೇರಿ 592 ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ 899 ಸೇರಿದಂತೆ ಒಟ್ಟು 1,670 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ 36 ಕೆಎಸ್ಆರ್ಪಿ/ಸಿಎಆರ್ ಇರಲಿದ್ದಾರೆ. ಈ ಭಾಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಾಳೆ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಕಾರ್ಯಕ್ರಮ ನಡೆಯುವ ಹಾಗಿಲ್ಲ.
ಒಟ್ಟಿನಲ್ಲಿ ಚುನಾವಣೆಯಲ್ಲಿ 16 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 4,62,236 ಮತದಾರರಲ್ಲಿ 2,09,828(ಶೇ.45.48) ಮತದಾರು ಮತದಾನ ಮಾಡಿದ್ದಾರೆ. ನಾಳೆ ಮಧ್ಯಾಹ್ನ ಒಳಗೆ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.