ಕರ್ನಾಟಕ

karnataka

ETV Bharat / state

ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ: ಹೈಕೋರ್ಟ್ - ಆನೇಕಲ್​ ಯೋಜನಾ ಪ್ರಾಧಿಕಾರ

High Court order: ನೀರು ಹರಿಯಲು ಸಮಸ್ಯೆ ಆಗುವುದಿಲ್ಲವೆಂದರೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಾಣವು ಒತ್ತುವರಿ ಮಾಡಿದಂತಲ್ಲ ಎಂದು ಹೈಕೋರ್ಟ್ ಹೇಳಿದೆ.

bridge-construction-over-rajakaluve-is-not-encroachment-high-court
ನೀರು ಹರಿಯಲು ಅಡ್ಡಿಯಾಗದಂತೆ ರಾಜಕಾಲುವೆ ಮೇಲೆ ಸೇತುವೆ ನಿರ್ಮಿಸಿದರೆ ಒತ್ತುವರಿಯಲ್ಲ: ಹೈಕೋರ್ಟ್

By ETV Bharat Karnataka Team

Published : Dec 9, 2023, 9:53 PM IST

ಬೆಂಗಳೂರು : ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಿಲ್ಲದಂತೆ ಕಾಲುವೆ ಮೇಲೆ ಸೇತುವೆ ನಿರ್ಮಾಣ ಮಾಡುವುದು ಒತ್ತುವರಿ ಮಾಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮೆಸೆಸ್​ ಜನಾರ್ಧನ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜಕಾಲುವೆಯ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸೇತುವೆ ನಿರ್ಮಾಣ ಮಾಡಿ, ರಾಜಕಾಲುವೆ ಒಳಭಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡದೆ, ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗದಂತಿದ್ದರೆ, ಅದು ಒತ್ತುವರಿ ಮಾಡಿದಂತೆ ಆಗುವುದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೆ, ಒತ್ತುವರಿ ಎಂದರೆ ಯಾವುದೇ ಒಬ್ಬ ವ್ಯಕ್ತಿಯೊಬ್ಬರಿಗೆ ಸೇರದ ಆಸ್ತಿಯ ಮೇಲೆ ಒತ್ತಾಯಪೂರ್ವಕ ಹಾಗೂ ಅನಧಿಕೃತವಾಗಿ ಸ್ವಾಧೀನ ಮಾಡಿಕೊಂಡಿರಬೇಕಾಗುತ್ತದೆ. ಜೊತೆಗೆ, ಪ್ರಸ್ತುತ ಅರ್ಜಿಗೆ ಸಂಬಂಧಿಸಿದಂತೆ ಯೋಜನಾ ಪ್ರಾಧಿಕಾರ ಪರಿಶೀಲನೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದಾದರೆ ಒತ್ತುವರಿಯಾಗಿಲ್ಲ ಎಂಬುದಾಗಿ ಅರ್ಥವಾಗಲಿದೆ. ಆದರೆ, ಬಳಿಕ ಖಾಸಗಿ ವ್ಯಕ್ತಿ ನೀಡಿದ ದೂರಿನ ಅನ್ವಯ ಒತ್ತುವರಿ ಆರೋಪದಲ್ಲಿ ಮತ್ತೆ ತಹಶೀಲ್ದಾರರಿಗೆ ಪತ್ರ ಪತ್ರ ಬರೆಯಲು ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಆನೇಕಲ್​ ಯೋಜನಾ ಪ್ರಾಧಿಕಾರ ತಹಶೀಲ್ದಾರ್​ ಅವರೊಂದಿಗೆ ನಡೆಸಿದ್ದ ಪತ್ರವ್ಯವಹಾರ ಹಾಗು ಒತ್ತುವರಿ ಆರೋಪ ಸಂಬಂಧ ಕಟ್ಟಡದ ಮುಂದೆ ಹಾಕಿದ್ದ ಫಲಕ ತೆರವುಗೊಳಿಸಲು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರರ ಕಂಪನಿಗೆ ಬೆಂಗಳೂರು ನಗರ ಜಿಲ್ಲಾ ಆನೇಕಲ್​ ತಾಲೂಕು, ಅತ್ತಿಬೆಲೆ ಹೋಬಳಿಯ ಎಂ.ಮೇಡಹಳ್ಳಿ ಗ್ರಾಮದಲ್ಲಿ ಜನಾಧಾರ ಶುಭ್​ ಹೆಸರಿಯಲ್ಲಿ 1,128 ವಸತಿ ಸಮುಚ್ಚಯ ನೀಡುವುದಕ್ಕಾಗಿ 2013ರ ಜನವರಿಯಲ್ಲಿ ಅನುಮತಿ ಸಿಕ್ಕಿತ್ತು. 2013ರ ಜೂನ್​ 5 ರಂದು ಆನೇಕಲ್​ ಯೋಜನಾ ಪ್ರಾಧಿಕಾರ ನೀಡಿದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿತ್ತು. ಅಲ್ಲದೆ, ಖರೀದಿದಾರರಿಗೆ ವಸತಿ ಸಮುಚ್ಚಯಗಳನ್ನು ಮಾರಾಟ ಮಾಡಲಾಗಿದ್ದು, ಎಲ್ಲ ರೀತಿಯ ಅನುಮತಿಗಳನ್ನು ಪಡೆದುಕೊಂಡಿದ್ದರು.

ಆದರೆ, ಪಿ.ಎಂ. ಕೃಷ್ಣಪ್ಪ ಎಂಬುವರು ನೀಡಿದ ದೂರಿನ ಅನ್ವಯ 2016ರ ಆಗಸ್ಟ್​ 19ರಂದು ಆನೇಕಲ್​ ಯೋಜನಾ ಪ್ರಾಧಿಕಾರ ತಹಶೀಲ್ದಾರ್​ಗೆ ಅರ್ಜಿದಾರರ ವಸತಿ ಸಮುಚ್ಚಯದಲ್ಲಿ ರಾಜಕಾಲುವೆ ಸೇತುವೆ ನಿರ್ಮಾಣ ಮಾಡುವ ಮೂಲಕ ಒತ್ತುವರಿ ಮಾಡಲಾಗಿದೆ ಎಂಬುದಾಗಿ ತಿಳಿಸಲಾಗಿತ್ತು. ಪರಿಣಾಮ ತಹಶೀಲ್ದಾರ್​ ಅವರು ವಸತಿ ಸಮುಚ್ಚಯದ ಮುಂದೆ ಒತ್ತುವರಿ ಮಾಡಲಾಗಿದೆ ಎಂಬುದಾಗಿ ಫಲಕ ಅಳವಡಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಭೂ ದಾಖಲೆಗಳ ಇಲಾಖೆ ಹೆಚ್ಚುವರಿ ನಿರ್ದೇಶಕರ ಮೂಲಕ ಸರ್ವೇ ಕಾರ್ಯ ನಡೆಸಲಾಗಿದೆ. ಅದರಂತೆ ಗ್ರಾಮದ ನಕ್ಷೆಯಲ್ಲಿ ಇರುವಂತೆ ರಾಜಕಾಲುವೆ ಮೇಲೆ ಯಾವುದೇ ಕಟ್ಟಡ ನಿರ್ಮಾಣ ಮಾಡಿಲ್ಲ ಎಂಬುದಾಗಿ ತಿಳಿಸಲಾಗಿದೆ. ಜೊತೆಗೆ, ವಸತಿ ಸಮುಚ್ಚಯವು ರಾಜಕಾಲುವೆ ಎರಡೂ ಬದಿಗಳಲ್ಲಿದ್ದು, ಅಲ್ಲಿಯ ನಿವಾಸಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿಬರುವುದಕ್ಕಾಗಿ ಮೂರು ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ, ನೀರು ಸರಾಗವಾಗಿ ಹರಿದುಹೋಗಲು ಕಾಂಕ್ರೀಟ್​ ಪೈಪ್ ಅಳವಡಿಸಲಾಗಿದ್ದು, ನೀರು ಹರಿಯುವುದಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ವಿವರಿಸಿದ್ದರು.

ಸರ್ಕಾರದ ಪರ ವಕೀಲರು, ರಾಜಕಾಲುವೆ ಮೇಲೆ ಯಾವುದೇ ಸೇತುವೆ ನಿರ್ಮಾಣ ಮಾಡಿಲ್ಲ. ಆದರೆ, ವಸತಿ ಸಮುಚ್ಚಯದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಜನ ಹೋಗಿ ಬರಲು ಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

ಇದನ್ನೂ ಓದಿ:ಗೌರಿ ಲಂಕೇಶ್ ಕೊಲೆ ಪ್ರಕರಣ: ಆರೋಪಿಗಳಿಗೆ ಆಶ್ರಯ ನೀಡಿದ್ದ ಮೋಹನ್ ನಾಯಕ್​ಗೆ ಷರತ್ತುಬದ್ಧ ಜಾಮೀನು

ABOUT THE AUTHOR

...view details