ಬೆಂಗಳೂರು:ಲಂಚ ಸ್ವೀಕರಿಸಿದ ಆರೋಪಕ್ಕೆ ಒಳಗಾದ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ. ತುಷಾರಮಣಿಯನ್ನು ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ. ಫಾರಂ ನಂಬರ್ 3 ಕೊಡಲು ಅರ್ಜಿದಾರರಿಂದ ಅಂದಾಜು 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಇದೀಗ ಎಂ.ವಿ. ತುಷಾರಮಣಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಅ.9 ರಂದು ಭ್ರಷ್ಟಾಚಾರ ನಿಗ್ರಹ ದಳದ ದಾಳಿಯಲ್ಲಿ ಪಾಲಿಕೆ ಆಯುಕ್ತರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಎಸ್ ಪಾಟೀಲ್ ಮತ್ತು ಹೊರಗುತ್ತಿಗೆ ಅಟೆಂಡರ್ ಎಸ್.ಭಾಷರನ್ನು 50,000 ರೂ.ಲಂಚ ಪಡೆಯುವಾಗ ದಸ್ತಗಿರಿ ಮಾಡಲಾಗಿತ್ತು. ಇದೇ ವೇಳೆ ಬಳ್ಳಾರಿಯ ನವ ಕರ್ನಾಟಕ ಯುವಶಕ್ತಿ ಅಧ್ಯಕ್ಷರು ದೂರು ನೀಡಿದ್ದು, ಅದರಲ್ಲಿ ಫಾರಂ-3 ಪಡೆಯಲು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಎಂ.ವಿ.ತುಷಾರಮಣಿ ಲಂಚದ ಬೇಡಿಕೆ ಇಟ್ಟು ಲಂಚ ಸ್ವೀಕರಿಸಿ ಆಯುಕ್ತರ ಪದವಿಯ ಘನತೆಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.