ಕರ್ನಾಟಕ

karnataka

ETV Bharat / state

ಎದೆ ಹಾಲುಣಿಸುವ ತಾಯಂದಿರ ಆಹಾರ ಕ್ರಮ ಹೇಗಿರಬೇಕು?: ಇಲ್ಲಿದೆ ಮಾಹಿತಿ

ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ ಇದ್ದಂತೆ. ಪೌಷ್ಟಿಕಾಂಶ ಭರಿತವಾಗಿರುವ ತಾಯಿಯ ಎದೆಹಾಲು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅವಶ್ಯಕ. ಇದು ಕೊಬ್ಬು, ಸಕ್ಕರೆ, ನೀರು ಮತ್ತು ಪ್ರೋಟೀನ್‌ನ ಉತ್ತಮ ಸಮತೋಲನವನ್ನು ಹೊಂದಿರುತ್ತವೆ.

ಎದೆ ಹಾಲುಣಿಸುವ ತಾಯಂದಿರ ಆಹಾರ ಕ್ರಮ
Breastfeeding

By

Published : Aug 8, 2021, 7:15 AM IST

Updated : Aug 8, 2021, 12:05 PM IST

ಬೆಂಗಳೂರು: ಮಗುವಿನ ಬೆಳವಣಿಗೆಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯವೋ ತಾಯಿಯ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಸೇವನೆ ಕೂಡ ಅಷ್ಟೇ ಮುಖ್ಯ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು, ಪೌಷ್ಟಿಕ ಮಟ್ಟ ಎಷ್ಟಿರಬೇಕು ಎಂಬ ಬಗ್ಗೆ ವಿಶ್ವ ಸ್ತನ್ಯಪಾನ ವಾರದ ವಿಶೇಷವಾಗಿ ನಗರದ ಫೋರ್ಟಿಸ್ ಆಸ್ಪತ್ರೆಯ ಮುಖ್ಯ ಆಹಾರ ತಜ್ಞೆ ರಿಂಕಿ ಕುಮಾರಿ ಕೆಲವು ಟಿಪ್ಸ್​ ನೀಡಿದ್ದಾರೆ.

ಎದೆ ಹಾಲುಣಿಸುವ ತಾಯಂದಿರು ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ:

  • ಹಾಲುಣಿಸುವ ತಾಯಿಯ ದೇಹವು 500 ಕಿಲೋ ಕ್ಯಾಲೋರಿಯಷ್ಟು ಪೌಷ್ಟಿಕಾಂಶವನ್ನು ಬಯಸುತ್ತದೆ. ಹೀಗಾಗಿ ಪ್ರೋಟೀನ್, ವಿಟಮಿನ್, ಕಬ್ಬಿಣಾಂಶಯುಕ್ತ ಆಹಾರ ಮತ್ತು ಕ್ಯಾಲ್ಸಿಯಂ ಭರಿತ ಆಹಾರವನ್ನು ಹೆಚ್ಚು ಸೇವಿಸಬೇಕು.
  • ಆಹಾರದಲ್ಲಿ ಪ್ರಮುಖವಾಗಿ ಬಗೆ ಬಗೆಯ ಬೇಳೆ ಕಾಳುಗಳು, ದಿನಸಿ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಡ್ರೈ ಫ್ರೂಟ್ಸ್, ತಾಜಾ ಹಣ್ಣು, ತರಕಾರಿಗಳು, ಮೊಟ್ಟೆ, ಚಿಕನ್ ನಂತಹ ಹೆಚ್ಚಿನ ಪ್ರೋಟೀನ್ ಅಂಶವಿರುವ ಆಹಾರವನ್ನು ದಿನಕ್ಕೆ 3-3 ಬಾರಿ ಸೇವನೆ ಮಾಡುವುದು ಒಳ್ಳೆಯದು. ಇದರಿಂದ ತಾಯಿಯ ದೇಹದ ಬೆಳವಣಿಗೆ ಸುಧಾರಿಸುವುದಲ್ಲದೇ, ಮಗುವಿಗೆ ಸಮರ್ಪಕವಾಗಿ ಹಾಲುಣಿಸಲು ಸಾಧ್ಯವಾಗಲಿದೆ.
  • ದಿನಕ್ಕೆ ಕನಿಷ್ಠ 8 ಗ್ಲಾಸ್ (ನಾಲ್ಕರಿಂದ-ಐದು ಲೀಟರ್) ನೀರು ಸೇವನೆ ಮುಖ್ಯ. ಜೊತೆಗೆ ಎಳನೀರಿನಂತಹ ತಾಜಾ ಪಾನೀಯ ಸೇವನೆ ಒಳ್ಳೆಯದು.
  • ಕೆಲವು ಆಹಾರ ಪದ್ಧತಿಗಳು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹೀಗಾಗಿ ತಾಯಿ ಏನೇ ಆಹಾರ ಸೇವನೆ ಮಾಡಿದರೂ ಮಗುವಿಗೆ ಹೊಂದಾಣಿಕೆಯಾಗುತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.
  • ಮಗು ಜನಿಸಿದ ಮೂರು ತಿಂಗಳವರೆಗೆ ತಾಯಿಯಲ್ಲಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಕೊರತೆ ಹೆಚ್ಚು ಕಾಡುತ್ತದೆ. ಹೀಗಾಗಿ ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರವನ್ನು ಕನಿಷ್ಠ 3 ತಿಂಗಳುಗಳ ಕಾಲ ಹೆಚ್ಚು ಸೇವನೆ ಒಳ್ಳೆಯದು.
  • ಮಗುವಿನ ಮೆದುಳಿನ ಬೆಳವಣಿಗೆಗೆ ಒಮೆಗಾ 3 ಕೊಬ್ಬಿನ ಆಮ್ಲ ಮುಖ್ಯವಾಗಿದೆ. ಹೀಗಾಗಿ ವಾರಕ್ಕೆ ಕನಿಷ್ಠ ಮೂರು ದಿನಗಳಾದರೂ ಮೀನು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅದರಲ್ಲೂ ಸಾಲ್ಮನ್, ಬ್ಲೂಫಿಶ್, ಟ್ರೌಟ್, ಫ್ಲೌಂಡರ್ ಮೀನುಗಳನ್ನು ಮಾತ್ರ ಸೇವನೆ ಮಾಡಬೇಕು.
  • ಎದೆ ಹಾಲಿನ ಪ್ರಮಾಣ ಹೆಚ್ಚಿಸುವ ಓಟ್‌ಮೀಲ್, ಬೆಳ್ಳುಳ್ಳಿ, ಪಾಲಕ್ ಮತ್ತು ಪಪ್ಪಾಯವನ್ನು ಸೇವಿಸಬೇಕು. ಇದು ಕಚೇರಿಗೆ ತೆರಳುವ ಮಹಿಳೆಯರಿಗೆ ಹೆಚ್ಚು ಉಪಯುಕ್ತ, ಜೊತೆಗೆ ರಕ್ತದೊತ್ತಡ ನಿವಾರಣೆ, ಬೊಜ್ಜು ಕರಗಿಸಲು ಸಹ ಸಹಕಾರಿಯಾಗಿದೆ.
  • ಮಾಂಸಹಾರ ಸೇವನೆ ಮಾಡದೇ ಇರುವವರು ಸಸ್ಯಹಾರದಲ್ಲಿಯೇ ಕೆಲವು ಪ್ರೋಷಕಾಂಶಯುಕ್ತ ಆಹಾರ ಸೇವಿಸಬಹುದು. ಡ್ರೈ ಬೀನ್ಸ್, ಡ್ರೈ ಫ್ರೂಟ್ಸ್, ಕಾಳುಗಳ ಸೇವನೆ ಮಾಡಬಹುದು. ಇದಲ್ಲದೆ ಕೆಲವು ಆರೋಗ್ಯಕರ ಆಹಾರ ಸೇವನೆಯಿಂದ ತಾಯಿಯ ಆರೋಗ್ಯದ ಜೊತೆಗೆ ಮಗುವಿಗೆ ಸೂಕ್ತಪ್ರಮಾಣದಲ್ಲಿ ಹಾಲುಣಿಸಲು ತಾಯಿ ಶಕ್ತಳಾಗಿರುತ್ತಾಳೆ.

ಏನು ಸೇವನೆ ಮಾಡಬಾರದು?:

  • ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪಥ್ಯೆ ಅನುಸರಿಸುವ ಮಹಿಳೆಯರು ಮಗುವಾದ ಬಳಿಕ ಊಟದ ವಿಷಯದಲ್ಲಿ ನಿರ್ಲಕ್ಷ್ಯ ಹೊಂದಿ, ಎಲ್ಲಾ ರೀತಿಯ ಆಹಾರ ಸೇವಿಸಲು ಮುಂದಾಗುತ್ತಾರೆ. ಆದರೆ, ಇದರಿಂದ ಎದೆ ಹಾಲು ಉತ್ಪತ್ತಿಗೆ ತೊಂದರೆಯಾಗುವ ಸಾಧ್ಯತೆ ಇದೆ.
  • ಮಗುವಿನ ನಿದ್ರೆಯ ಮೇಲೆ ಪರಿಣಾಮ ಬೀರುವುದರಿಂದ ಕಾಫಿ ಅಥವಾ ಕೆಫೀನ್​ಯುಕ್ತ ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು.
  • ಯಾವುದೇ ಆಹಾರವಾಗಲಿ ಮಿತಿ ಮೀರಿ ತಿಂದರೆ ಅದರಿಂದ ಅಲರ್ಜಿ, ಜೀರ್ಣಕ್ರಿಯೆ ಆಗದೇ ಇರುವ ಸಮಸ್ಯೆ ಉಂಟಾಗಬಹುದು.
  • ಹಾಲುಣಿಸುವ ಮಹಿಳೆಯರು ಮದ್ಯಪಾನ, ಧೂಮಪಾನ ಸೇವನೆ ಮಾಡುವುದು ಹೆಚ್ಚು ಅಪಾಯಕಾರಿ. ಜೊತೆಗೆ ಜಂಕ್​ಫುಡ್​​ ಸೇವನೆ ಪ್ರಮಾಣ ಕೂಡ ಮಿತಿ ಮೀರಬಾರದು.
  • ಕತ್ತಿಮೀನು, ಕಿಂಗ್‌ಮ್ಯಾಕೆರೆಲ್ ಮತ್ತು ಟೈಲ್ಫಿಶ್ ಸೇರಿದಂತೆ ಇತರೆ ಸಮುದ್ರದ ಮೀನುಗಳ ಸೇವನೆ ಒಳ್ಳೆಯದಲ್ಲ. ಏಕೆಂದರೆ, ಇದು ಮಗುವಿನ ನರಮಂಡಲಕ್ಕೆ ಹೆಚ್ಚು ಅಪಾಯ ಉಂಟುಮಾಡಲಿದೆ.
Last Updated : Aug 8, 2021, 12:05 PM IST

ABOUT THE AUTHOR

...view details