ಬೆಂಗಳೂರು: ರಾಜ್ಯದಲ್ಲಿರುವ 205 ಮುಜರಾಯಿ ದೇವಸ್ಥಾನಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ದೇವಾಲಯಗಳಿಗೆ ಬರುವ ತಾಯಂದಿರುಗಳಿಗೆ ತಮ್ಮ ಮಕ್ಕಳಿಗೆ ಹಾಲುಣಿಸುವ ಸಮಯದಲ್ಲಿ ಮುಜುಗರ ಉಂಟಾಗಬಾರದೆಂದು ಹಾಗೂ ಅವರಿಗೆ ಸಹಕಾರಿಯಾಗಲಿ ಎಂಬ ಉದ್ದೇಶದೊಂದಿಗೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಹಾಲುಣಿಸುವ ಕೊಠಡಿ ಮಾದರಿಯಲ್ಲೇ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲ ಎ ದರ್ಜೆ ದೇವಾಲಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಗರದ ಬನಶಂಕರಿ ದೇವಾಲಯದ ಆವರಣದಲ್ಲಿ "ಅಮ್ಮನಿಗೆ ಗೌರವ"ಎಂಬ ಶೀರ್ಷಿಕೆಯಡಿ ಹಾಲುಣಿಸುವ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮುಜರಾಯಿ ಇಲಾಖೆ ಅನುದಾನ ಕಡಿತದ ಬಗ್ಗೆ ಇಲಾಖೆಯ ಆಯುಕ್ತರ ಆದೇಶವು ಗೊಂದಲಕ್ಕೆ ಕಾರಣವಾಗಿದೆ. ತಕ್ಷಣವೇ ಈ ಆದೇಶ ಹಿಂಪಡೆದಿದ್ದೇವೆ ಎಂದು ಹೇಳಿದರು.
ಸೋಮವಾರ ಆಟೋ ಸಂಘಟನೆಗಳ ಜೊತೆ ಸಿಎಂ ಸಭೆ ಮಾಡುತ್ತಾರೆ. ಆಟೋ ಸಂಘಟನೆಗಳು, ಮ್ಯಾಕ್ಸಿ ಕ್ಯಾಬ್ ಸಂಘಟನೆಗಳೊಂದಿಗೆ ಈಗಾಗಲೇ ಮೂರು ಸಭೆ ನಡೆಸಿದ್ದೇನೆ. ಸಿಎಂ ಜೊತೆಗಿನ ಸಭೆಯಲ್ಲಿ ಆಟೋ ಸಂಘಟನೆಗಳ ಬೇಡಿಕೆ ಈಡೇರುತ್ತದೆ. ನಮ್ಮ ಸರ್ಕಾರ ಸಂಘಟನೆಗಳ ಬೇಡಿಕೆ ಈಡೇರಿಸಲು ಬದ್ಧವಾಗಿದೆ. ಆಟೋ, ಕ್ಯಾಬ್ಗೆ ದರ ನಿಗದಿ ಮಾಡಲು ಸರ್ಕಾರವು ಆದಷ್ಟು ಶೀಘ್ರದಲ್ಲಿ ಆ್ಯಪ್ ಬಿಡುಗಡೆ ಮಾಡಲಿದೆ ಎಂದ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆಯಿಂದ ಮುಜರಾಯಿ ಇಲಾಖೆಗೆ ಆದಾಯ ವಿಚಾರವಾಗಿ ಮಾತನಾಡಿ, ನಿರೀಕ್ಷೆಗೂ ಮೀರಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಶೀಘ್ರದಲ್ಲೇ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಹೇಳಿದರು.