ಬೆಂಗಳೂರು :ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಎದೆ ಹಾಲಿನ ಕುರಿತಾದ ಜಾಗೃತಿ ವಾಕಥಾನ್ ನಗರದಲ್ಲಿ ನಡೆಯಿತು. ಬೆಂಗಳೂರು ಜಂಕ್ಷನ್ ರೋಟರಿ ಕ್ಲಬ್, ಗುಣಶೀಲ ಫರ್ಟಿಲಿಟಿ ಸೆಂಟರ್, ಸ್ತನ ಹಾಲು ಪ್ರತಿಷ್ಠಾನದ ಸಹಯೋಗದಲ್ಲಿ ತಾಯಿಯ ಹಾಲಿನಿಂದ ವಂಚಿತರಾದ ದುರ್ಬಲ ಶಿಶುಗಳ ರಕ್ಷಣೆಗಾಗಿ ಎದೆ ಹಾಲಿನ ಜಾಗೃತಿಗಾಗಿ ವಾಕಥಾನ್ ಆಯೋಜನೆ ಮಾಡಲಾಗಿತ್ತು. ಬಸವನಗುಡಿಯಲ್ಲಿರುವ ಗುಣಶೀಲಾ ಕೇಂದ್ರ ಆದ್ಯ ಎಂಬ ಹೆಸರಿನಲ್ಲಿ ಬೆಂಗಳೂರಿನ ಸಾರ್ವಜನಿಕ ಹ್ಯೂಮನ್ ಮಿಲ್ಕ್ ಬ್ಯಾಂಕ್ ಆರಂಭಿಸಲಾಗಿದೆ.
ಎದೆ ಹಾಲಿನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯವಂತ ದಾನಿ ತಾಯಂದಿರು ಮುಂದೆ ಬರಲು, ಪ್ರಸವಪೂರ್ವ ಮತ್ತು ದುರ್ಬಲ ಶಿಶುಗಳಿಗೆ ಹೆಚ್ಚುವರಿ ಹಾಲನ್ನು ದಾನ ಮಾಡಲು ಪ್ರೋತ್ಸಾಹಿಸುವುದು ವಾಕಥಾನ್ ಉದ್ದೇಶವಾಗಿತ್ತು. ಬಸವನಗುಡಿಯ ಗುಣಶೀಲ ಕೇಂದ್ರದಿಂದ ಆರಂಭವಾದ ವಾಕಥಾನ್ ಲಾಲ್‌ಬಾಗ್ ರಾಮಕೃಷ್ಣ ಮಠದ ರಸ್ತೆ, ಗಾಂಧಿ ಬಜಾರ್ ಮತ್ತು ಬಸವನಗುಡಿವರೆಗೂ ನಡೆಯಿತು.
ಈ ವೇಳೆ ಡಾ.ದೇವಿಕಾ ಗುಣಶೀಲ ಮಾತನಾಡಿ, ಬೆಂಗಳೂರು ಘಟಕದಲ್ಲಿ ‘ಆದ್ಯ’ ಸಾರ್ವಜನಿಕ ಹ್ಯೂಮನ್ ಮಿಲ್ಕ್ ಬ್ಯಾಂಕ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ್ದೇವೆ. ತಾಯಿಯೂ ತನ್ನ ಮನೆಯಲ್ಲಿ ಹಾಲನ್ನು ಸಂಗ್ರಹಿಸಿ ಕೊಟ್ಟ ನಂತರ ಬ್ಯಾಂಕಿನಿಂದ ವಿಶೇಷ ಫ್ರೀಜರ್ ಬಾಕ್ಸ್‌ಗಳಲ್ಲಿ ಹಾಲನ್ನು ಶೇಖರಿಸಲಾಗುತ್ತದೆ. ಆ ಮೂಲಕ ಅಗತ್ಯವಿರುವ ಮಗುವಿಗೆ ಎದೆ ಹಾಲನ್ನು ನೀಡಲಾಗುತ್ತದೆ ಎಂದರು.