ಬೆಂಗಳೂರು: ಶಾಸಕರ ಅನಗತ್ಯ ದೆಹಲಿ ಯಾತ್ರೆಗೆ ಬ್ರೇಕ್ ಹಾಕುವುದಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಪೂರ್ವಾನುಮತಿ ಪಡೆದು ಬಂದವರಿಗಷ್ಟೇ ಪಕ್ಷದ ನಾಯಕರ ಭೇಟಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.
ಕೆಲ ಸಚಿವರು ಮತ್ತು ಶಾಸಕರು ಪದೇ ಪದೇ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಯಾವುದಕ್ಕಾಗಿ ಹೋಗುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ ಪ್ರತಿ ಬಾರಿ ದೆಹಲಿ ಯಾತ್ರೆ ಮಾಡಿದಾಗಲೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವದಂತಿ ಹರಿದಾಡುತ್ತದೆ. ಅನಗತ್ಯವಾಗಿ ಗೊಂದಲ ಸೃಷ್ಟಿಯಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಅರುಣ್ ಸಿಂಗ್, ಶಾಸಕರು ಮತ್ತು ಸಚಿವರ ದೆಹಲಿ ಯಾತ್ರೆ ಬಗ್ಗೆ ನನಗೂ ಮಾಹಿತಿ ಇದೆ. ಇನ್ಮುಂದೆ ಇದಕ್ಕೆ ಕಡಿವಾಣ ಹಾಕಲಾಗುತ್ತದೆ. ಪೂರ್ವಾನುಮತಿ ಪಡೆದೇ ದೆಹಲಿಗೆ ಬಂದರಷ್ಟೇ ಕೇಂದ್ರದ ನಾಯಕರ ಭೇಟಿಯಾಗಲಿದ್ದಾರೆ. ದೆಹಲಿಗೆ ಬಂದು ಅನುಮತಿ ಕೋರಿದರೆ ಅವಕಾಶ ನಿರಾಕರಿಸಲಾಗುತ್ತದೆ ಎಂದರು.
ಈ ಸಂಬಂಧ ವರಿಷ್ಠರ ಜೊತೆಗೂ ಮಾತನಾಡುತ್ತೇನೆ. ಯಾವ ವಿಚಾರಕ್ಕೆ ದೆಹಲಿಗೆ ಬರಲಾಗುತ್ತಿದೆ, ಯಾವ ವಿಷಯದ ಬಗ್ಗೆ ಚರ್ಚೆಗೆ ಮಾಡುತ್ತಾರೋ ಸೇರಿ ಅಗತ್ಯತೆ ನೋಡಿಕೊಂಡು ಹೈಕಮಾಂಡ್ ನಾಯಕರು ಅನುಮತಿ ನೀಡುತ್ತಾರೆ. ಅನುಮತಿ ಸಿಕ್ಕವರು ಮಾತ್ರ ದೆಹಲಿಗೆ ಬರಬೇಕು ಇಲ್ಲದೇ ಇದ್ದರೆ ದೆಹಲಿಗೆ ಬರುವಂತಿಲ್ಲ. ಒಂದು ವೇಳೆ ಬಂದರೂ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗುವುದಿಲ್ಲ ಎಂದು ಭಿನ್ನಮತೀಯ ಚಟುವಟಿಕೆ ನಡೆಸುತ್ತಾ ಪದೇ ಪದೇ ದೆಹಲಿ ವಿಮಾನ ಏರುವ ನಾಯಕರಿಗೆ ಎಚ್ಚರಿಕೆ ನೀಡಿದರು.