ಬೆಂಗಳೂರು: ನಗರದಲ್ಲಿ ಶನಿವಾರ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಈ ಸಂದರ್ಭದಲ್ಲಿ, ಮುಂದಿನ ವಿಧಾನಸಭಾ ಚುನಾವಣೆಗೆ ಸಮುದಾಯವರು ಹೆಚ್ಚಿರುವ ರಾಜ್ಯದ ಸುಮಾರು 25 ವಿಧಾನಸಭಾ ಕ್ಷೇತ್ರಗಳಲ್ಲಿ ಬ್ರಾಹ್ಮಣರಿಗೆ ಮಾತ್ರ ಟಿಕೆಟ್ ನೀಡಬೇಕೆಂದು ಮಹಾಸಭಾ ಆಗ್ರಹಿಸಿತು. ಮಹಾಸಭಾ ಅಧ್ಯಕ್ಷರಾದ ಅಶೋಕ ಹಾರನಹಳ್ಳಿ ನೇತೃತ್ವದಲ್ಲಿ ಎಲ್ಲಾ ಜಿಲ್ಲೆಗಳಿಂದ ಆಗಮಿಸಿದ ಸಮುದಾಯದ ಮುಖಂಡರು ರಾಜಕೀಯ ಸ್ಥಾನಮಾನದ ಕುರಿತು ಚರ್ಚಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ವಿಪ್ರರು ಒಂದು ಲಕ್ಷ ಜನರಿದ್ದು, ಅದರಲ್ಲೂ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ 35 ರಿಂದ 40 ಸಾವಿರ ಮತದಾರರು ನಿರ್ಣಾಯಕರಾಗಿದ್ದಾರೆ. ಅದೇ ರೀತಿ, ಬೆಂಗಳೂರಿನ ಜಯನಗರ, ಮಲ್ಲೇಶ್ವರಂ, ಬಸವನಗುಡಿ, ರಾಜಾಜಿನಗರ, ಉಡುಪಿ, ಶಿವಮೊಗ್ಗ, ಮಂಗಳೂರು ಸೇರಿದಂತೆ ಒಟ್ಟು 25 ಕ್ಷೇತ್ರಗಳಲ್ಲಿ ಬ್ರಾಹ್ಮಣರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರನ್ನು ಪರಿಗಣಿಸಿ ಈ ಬಾರಿ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ:ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿಯಿಂದ ಮೋಸ, ಕುಮಾರಸ್ವಾಮಿಯಿಂದ ಅಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ
ರಾಜಕೀಯ ಪಕ್ಷಗಳಿಗೆ ಅಧಿಕೃತ ಮನವಿ:ಈಗಾಗಲೇ ರಾಜಕೀಯ ಪಕ್ಷಗಳ ವರಿಷ್ಠರೊಂದಿಗೆ ಔಪಚಾರಿಕವಾಗಿ ಮಾತುಕತೆ ನಡೆಸಿ ಮನವಿ ಮಾಡಲಾಗಿದೆ. ಶೀಘ್ರದಲ್ಲೇ ಪತ್ರದ ಮುಖೇನ ಅಧಿಕೃತವಾಗಿ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುವುದು ಎಂದು ಸಭೆಯಲ್ಲಿ ಅಶೋಕ ಹಾರನಹಳ್ಳಿ ಹೇಳಿದರು.