ಕರ್ನಾಟಕ

karnataka

ETV Bharat / state

ಒಕ್ಕಲಿಗರು, ಲಿಂಗಾಯತರಿಗೆ EWS 10% ಮೀಸಲಾತಿ ಮರುಹಂಚಿಕೆ: ಬ್ರಾಹ್ಮಣ ಮಹಾಸಭಾ ವಿರೋಧ - ಮೀಸಲಾತಿಗೆ ಬ್ರಾಹ್ಮಣ ಮಹಾಸಭಾ ವಿರೋಧ

ಪಂಚಮಸಾಲಿ, ಒಕ್ಕಲಿಗರಿಗೆ EWS ಮೀಸಲಾತಿಯಲ್ಲಿ ಹಂಚಿಕೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಬ್ರಾಹ್ಮಣ ಮಹಾಸಭಾ ವಿರೋಧಿಸಿದೆ. ಇತ್ತ ಮೀಸಲಾತಿ ಪ್ರಕಟಿಸುವಂತೆ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯ ಗಡುವು ನೀಡಿದೆ.

ಅಶೋಕ್ ಹಾರ್ನಳ್ಳಿ
ಅಶೋಕ್ ಹಾರ್ನಳ್ಳಿ

By

Published : Jan 7, 2023, 7:42 AM IST

ಬೆಂಗಳೂರು: ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗರ ಮೀಸಲಾತಿಗಾಗಿ EWS 10% ಮೀಸಲಾತಿ ಮರುಹಂಚುವ ಸರ್ಕಾರದ ಚಿಂತನೆಗೆ ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ. 10% EWS ಮೀಸಲಾತಿಯನ್ನು ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗರಿಗೆ ಕಲ್ಪಿಸಲು ಉದ್ದೇಶಿರುವ ಪ್ರತ್ಯೇಕ ಪ್ರವರ್ಗಗಳಿಗೆ ಮರುಹಂಚುವ ನಿರ್ಧಾರಕ್ಕೆ ಬ್ರಾಹ್ಮಣ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಸುಪ್ರಿಂ ಕೋರ್ಟ್​ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ವಿಡಿಯೋ ಸಂದೇಶದ ಮೂಲಕ ಸರ್ಕಾರದ ನಿರ್ಧಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.

10% EWS ಮೀಸಲಾತಿಯಿಂದ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಮೀಸಲಾತಿ ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಶೋಕ್ ಹಾರನಹಳ್ಳಿ ಅವರು, ಇದು ಸರ್ಕಾರದ ಬ್ರಾಹ್ಮಣ ವಿರೋಧಿ ನಡೆಯಾಗಿದೆ ಎಂದು ದೂರಿದ್ದಾರೆ. ಸರ್ಕಾರದ ಈ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ. EWS ಮೀಸಲಾತಿಯನ್ನು ಹಂಚಿಕೆ ಮಾಡದಂತೆ ಸಮುದಾಯದ ಎಲ್ಲರೂ ಒಂದಾಗಿ ಹೋರಾಡಬೇಕಾಗಿದೆ ಎಂದು ಕರೆ ನೀಡಿದ್ದಾರೆ.

ಸರ್ಕಾರದ ಯೋಜನೆ ಏನು?:ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳ ಮೀಸಲಾತಿ ಬೇಡಿಕೆ ಪೂರೈಸಲು ರಾಜ್ಯ ಸರ್ಕಾರ ಹೊಸದಾಗಿ 2C ಹಾಗೂ 2D ಪ್ರವರ್ಗ ಸೃಷ್ಟಿಸಲು ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನಿಸಿತ್ತು. ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು. 3A ನಲ್ಲಿರುವ ಒಕ್ಕಲಿಗರಿಗೆ 2C ಪ್ರವರ್ಗ ಸೃಷ್ಟಿಸಲಾಗಿದ್ದರೆ, 3B ಯಲ್ಲಿದ್ದ ಪಂಚಮಸಾಲಿ ಸೇರಿ ಲಿಂಗಾಯತರಿಗೆ 2D ಕ್ಯಾಟಗರಿ ಸೃಷ್ಟಿಸಲು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ರಾಜ್ಯದಲ್ಲಿ EWSನ 10% ಮೀಸಲಾತಿಯಲ್ಲಿ ಪ್ರತ್ಯೇಕ 2ಸಿ ಮತ್ತು 2ಡಿ ಪ್ರವರ್ಗಕ್ಕೆ ಹಂಚಲು ಸರ್ಕಾರ ನಿರ್ಧರಿಸಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರುವ ಜನರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಮೀಸಲಾತಿ ನೀಡಿ, ಉಳಿದದ್ದನ್ನು 2C ಹಾಗೂ‌ 2Dಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದರು. ಆದ್ರೆ ಎಷ್ಟು ಶೇಕಡಾ ಹಂಚಿಕೆ ಮಾಡಲಿದ್ದಾರೆ ಎಂದು ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ.

ಆದರೆ ಡಬ್ಲ್ಯುಎಸ್ ಶೇ.10 ಮೀಸಲಾತಿಯಿಂದ ಶೇ.3ರಷ್ಟು ಪ್ರವರ್ಗ '2ಸಿ'ಗೆ, ಶೇ.4ರಷ್ಟು ಮೀಸಲಾತಿ ಪ್ರವರ್ಗ 2ಡಿಗೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹಿಂದುಳಿದ ವರ್ಗಗಳ ಪ್ರವರ್ಗ 3Aಯಲ್ಲಿ (ಒಕ್ಕಲಿಗ, ರೆಡ್ಡಿ, ಬಲಿಜ, ಬಂಟ, ಕೊಡವ ಸೇರಿ 12ಜಾತಿಗಳು), ಪ್ರವರ್ಗ 3B (ವೀರಶೈವ ಮತ್ತು ಲಿಂಗಾಯತ ಸಮುದಾಯದ ಎಲ್ಲ ಉಪಜಾತಿಗಳು) ಇವೆ.

ಪಂಚಮಸಾಲಿ ಸಮುದಾಯದ ಪಾದಯಾತ್ರೆ, ಹೋರಾಟ:ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2ಎ ಮೀಸಲಾತಿಗಾಗಿ ಪಾದಯಾತ್ರೆ, ಹೋರಾಟಗಳು ನಡೆದಿದ್ದವು. ಹಾಗೆಯೇ ಒಕ್ಕಲಿಗರ ಸಮುದಾಯ ಕೂಡ ಮೀಸಲಾತಿ ನೀಡುವಂತೆ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಜಾಣ ನಡೆ ಅನುಸರಿಸಿ, ಹೊಸ ಪ್ರತ್ಯೇಕ ಪ್ರವರ್ಗ ರಚಿಸಿತ್ತು.

ಸರ್ಕಾರಕ್ಕೆ ಗಡುವು: ಆದ್ರೆ ಈ ಹೊಸ ಮೀಸಲಾತಿಯ ಬಗ್ಗೆ ಪಂಚಮಸಾಲಿ ಸಮುದಾಯ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಗುರುವಾರ ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೀಸಲಾತಿ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಂತೆ ಸಮುದಾಯದ ಮುಖಂಡರು 24 ಗಂಟೆಗಳ ಗಡುವು ನೀಡಿದ್ದರು. ಮೀಸಲಾತಿಯಲ್ಲಿ ಗೊಂದಲವಿದೆ. ನಮಗೆ ತೃಪ್ತಿ ಇಲ್ಲ. ಹಾಗಾಗಿ ಮೀಸಲಾತಿ ಕೊಡ್ತಿರೋ ಇಲ್ವೋ? ಅನ್ನೋದ ಮೊದಲು ಹೇಳಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಹೊರಹಾಕಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಸಮುದಾಯಗಳ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಸರ್ಕಾರ ಜಾಣ ನಡೆ ಇಟ್ಟಿದೆ. ಆದ್ರೆ ಆ ನಡೆಯ ಬಗ್ಗೆ ಹಲವು ಅನುಮಾನ ಮತ್ತು ಆಕ್ಷೇಪಗಳು ವ್ಯಕ್ತವಾಗುತ್ತಿರುವುದು ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.

(ಓದಿ: ಲಿಂಗಾಯತ, ಒಕ್ಕಲಿಗರಿಗೆ 2D - 2C ಪ್ರವರ್ಗ ಮೀಸಲಾತಿ: ಸರ್ಕಾರದ ರಿಸರ್ವೇಶನ್ ಮರು ಹಂಚಿಕೆ ಲೆಕ್ಕಾಚಾರವೇನು?)

ABOUT THE AUTHOR

...view details