ಬೆಂಗಳೂರು: ಒಟ್ಟಿಗೆ ರಾಜಕಾರಣಕ್ಕೆ ಬಂದರೂ ನಾನು ಎರಡು ಬಾರಿ ಮುಖ್ಯಮಂತ್ರಿ ಆದೆ. ಆದರೆ ಬಿ.ಆರ್.ಪಾಟೀಲ್ ಏನೂ ಆಗಲಿಲ್ಲ. ಈ ಬಾರಿ ಅವರನ್ನು ಮಂತ್ರಿ ಮಾಡಬೇಕಿತ್ತು. ಆದರೆ ಅನೇಕ ಕಾರಣಗಳಿಂದ ಅವರನ್ನು ಸಚಿವರನ್ನಾಗಿ ಮಾಡಲಾಗಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ದಿನಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕುಮಾರಪಾರ್ಕ್ನಲ್ಲಿರುವ ಚಿತ್ರಕಲಾ ಪರಿಷತ್ನಲ್ಲಿ ಭಾರತ್ ಯಾತ್ರಾ ಕೇಂದ್ರ ಆಯೋಜನೆ ಮಾಡಿದ್ದ ಜಯಪ್ರಕಾಶ್ ನಾರಾಯಣ್-122 ಜನ್ಮದಿನಾಚರಣೆ ಮತ್ತು ಜೆಪಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಬಿ ಆರ್ ಪಾಟೀಲ್ಗೆ ಜೆಪಿ ಪ್ರಶಸ್ತಿ ಪ್ರದಾನ ಮಾಡಿದರು. ನಂತರ ಮಾತನಾಡಿದ ಸಿಎಂ, ಬಿ.ಆರ್.ಪಾಟೀಲ್ ಹಾಗು ನಾನು ಒಟ್ಟಿಗೆ ರಾಜಕಾರಣ ಪ್ರವೇಶ ಮಾಡಿದ್ದೆವು. ಒಟ್ಟಿಗೆ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯ ನಂತರ ಶಾಸಕರಾದೆವು. ಇಬ್ಬರೂ ಸಮಾಜವಾದಿ ಹಿನ್ನೆಲೆಯಿಂದ ಬಂದವರು.
ಹಾಗಾಗಿ ಅಂದಿನಿಂದ ಇಂದಿನವರೆಗೂ ಸ್ನೇಹಿತರಾಗಿಯೇ ಉಳಿದಿದ್ದೇವೆ. ಮುಂದೆಯೂ ಸ್ನೇಹಿತರಾಗಿ ಉಳಿಯುತ್ತೇವೆ. ನಾವಿಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳಲಿದ್ದೇವೆ. ಎರಡು ವರ್ಷ ಚಿಕ್ಕವನಾದರೂ ರಾಜಕೀಯದಲ್ಲಿ ಸಮಾನರು. ಆದರೆ ನಾನು, ಪಾಟೀಲ್ ಅವರಷ್ಟು ಹೋರಾಟಗಾರ ಅಲ್ಲ. ಅವರು ಜೆಪಿ ಚಳುವಳಿಯಲ್ಲಿ ಭಾಗಿಯಾಗಿ ತುರ್ತುಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋದರು. ಆದರೆ ನಾನು ತುರ್ತುಪರಿಸ್ಥಿತಿ ವಿರೋಧಿಸಿದರೂ ಜೈಲಿಗೆ ಹೋಗಿರಲಿಲ್ಲ ಎಂದರು.
ಜನಪರ ಚಿಂತನೆ ಮಾಡುವವರಿಂದ ಮಾತ್ರ ಜನರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯ. ನಾನು 2013 ರ ಸಿದ್ದರಾಮಯ್ಯ ಆಗಬೇಕು ಎಂದು ಬಿ ಆರ್ ಪಾಟೀಲ್ ಹೇಳಿದ್ದಾರೆ. ಆದರೆ ನಾನು 2013-18 ರ ಸಿದ್ದರಾಮಯ್ಯ ಇದ್ದಂತೆ 2023 ರಿಂದಲೂ ಇದ್ದೇನೆ. ಜನಪರ ಕಾಳಜಿ, ಜನಪರ ಆಡಳಿತ ನೀಡಬೇಕು ಎನ್ನುವ ಆಶಯ ಇದೆ. ನ್ಯಾಯ ಒದಗಿಸುವ ಬದ್ದತೆ ಇದೆ. ನಮ್ಮ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ವ್ಯವಸ್ಥೆ ಕಾರಣಕ್ಕೆ ಸಾಮಾಜಿಕ, ಆರ್ಥಿಕ ಅಸಮಾನತೆ ಇದೆ. ಇದನ್ನು ತೊಡಗಿಸದೆ ಪ್ರಜಾಪ್ರಭುತ್ವ ಯಶಸ್ವಿ ಮಾಡಲು ಸಾಧ್ಯವಿಲ್ಲ. ಸಾಮಾಜಿಕ ಅಸಮಾನತೆ ತೊಡೆದುಹಾಕದೆ ಇದ್ದರೆ ಪ್ರಜಾಪ್ರಭುತ್ವಸೌಧವನ್ನು ಅನ್ಯಾಯಕ್ಕೆ ಒಳಗಾದ ಜನರೇ ಧ್ವಂಸ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ಮಾತನ್ನು ಅಂಬೇಡ್ಕರ್ ಹೇಳಿದ್ದರು. ಈ ಮಾತುಗಳು ಸದಾ ನನ್ನನ್ನು ಎಚ್ಚರಿಸುತ್ತಲೇ ಇರುತ್ತವೆ. ಹಾಗಾಗಿ ಮೊದಲ ಅವಧಿಯಲ್ಲಿ ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ ಎಂದರು.
ನಾವು ಬಜೆಟ್ ಸಿದ್ದಪಡಿಸುವಾಗ ನಮ್ಮ ಪ್ರಣಾಳಿಕೆ ಇಟ್ಟುಕೊಂಡೇ ಸಿದ್ದಪಡಿಸಲಿದ್ದೇವೆ. ಯಾವ ಸಿಎಂ ಕೂಡ ಕೊಟ್ಟ ಭರವಸೆ ಈಡೇರಿಸಿದ ನಿದರ್ಶನ ಇಲ್ಲ. ಆದರೆ ಹಿಂದೆ ನಾನು ಈಡೇರಿಸಿದ್ದೆ. ಈಗಲೂ ನಾವು ಕೊಟ್ಟಿರುವ ಎಲ್ಲ ಭರವಸೆ ಈಡೇರಿಸಲಿದ್ದೇವೆ. ಪಂಚ ಗ್ಯಾರಂಟಿಯಲ್ಲಿ ನಾಲ್ಕು ಈಡೇರಿಸಿದ್ದು, ಜನವರಿಯಲ್ಲಿ ಐದನೇ ಗ್ಯಾರಂಟಿ ಈಡೇರಿಸಲಿದ್ದೇವೆ. ಯಾವ ಕಾರಣಕ್ಕೂ ಹೆಜ್ಜೆ ಹಿಂದೆ ಇಡಲ್ಲ. ಎಷ್ಟೇ ಹೊರೆಯಾದರೂ ಭರವಸೆ ಈಡೇರಿಸಲಿದ್ದೇವೆ ಎಂದು ಹೇಳಿದರು.
ಐದು ವರ್ಷ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿದರು. ಹಣವಿಲ್ಲದೆ ಯೋಜನೆ ಘೋಷಿಸಿದ್ದಾರೆ. ದೊಡ್ಡ ಮೊತ್ತದ ಬಾಕಿ ಬಿಲ್ ಇವೆ. ನಾನು ಮಧ್ಯದಲ್ಲಿ ಅಧಿಕಾರಕ್ಕೆ ಬಂದರೂ ಬಜೆಟ್ ಮಂಡನೆಯಾಗಿದ್ದರೂ 36 ಸಾವಿರ ಕೋಟಿ ಹೊಂದಿಸಿದ್ದೇವೆ. ಮುಂದಿನ ವರ್ಷ 56 ಸಾವಿರ ಕೋಟಿ ಬೇಕು. ಇದರಲ್ಲಿ ಜಾತಿ, ಧರ್ಮ ಇದೆಯಾ?. ಎಲ್ಲರಿಗೂ ಈ ಯೋಜನೆ ಮಾಡಿಲ್ಲವಾ?. ಇಲ್ಲಿ ಜಾತಿ ಎಲ್ಲಿದೆ?. ಯಾವ ಜಾತಿ ಧರ್ಮ ಬಿಟ್ಟಿದ್ದೇವೆ? ಎಲ್ಲರಿಗೂ ಸರ್ವೋದಯ ಆಗಬೇಕು ಎನ್ನುವ ಆಶಯದಿಂದ ಇದನ್ನು ತಂದಿದ್ದೇವೆ ಎಂದರು.
ಯೂನಿವರ್ಸಲ್ ಬೇಸಿಕ್ ಇನ್ ಕಮ್ ವ್ಯವಸ್ಥೆ ಯೂರೋಪ್ನಲ್ಲಿದೆ. ಅದರ ಆಶಯದಂತೆ ನಾವು ಉಚಿತ ಯೋಜನೆ ತಂದಿದ್ದೇವೆ. ಇದರಿಂದ ಜನರಿಗೆ ಕೊಂಡುಕೊಳ್ಳುವ ಶಕ್ತಿ ಬರಲಿದೆ. 75 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದಲ್ಲಿ ಹೋಟೆಲ್ಗೆ ಹೋಗುತ್ತಾರೆ. ವ್ಯಾಪಾರ ಆಗಿ ಸರ್ಕಾರಕ್ಕೆ ತೆರಿಗೆ ಬಂದು ರಾಜ್ಯದ ಜಿಡಿಪಿ ಹೆಚ್ಚಾಗಲಿದೆ ಎಂದು ಉಚಿತ ಯೋಜನೆ ಸಮರ್ಥಿಸಿಕೊಂಡರು.
ಬಿ.ಆರ್.ಪಾಟೀಲ್ಗೆ ನನ್ನಲ್ಲಿ ಬದಲಾವಣೆ ಕಂಡಿದೆ. ಹಿಂದಿನ ಸಿದ್ದರಾಮಯ್ಯ ಆಗಬೇಕು ಎನ್ನುತ್ತಿದ್ದಾರೆ. ಆದರೆ ನಾನು ಬದಲಾಗಿಲ್ಲ. ಸ್ವಲ್ಪ ವಯಸ್ಸಿನ ಕಾರಣ ಇರಬಹುದು. ಅದಕ್ಕಾಗಿ ಆ ರೀತಿ ಕಾಣಬಹುದು. ಆದರೆ ಬದ್ದತೆಯಲ್ಲಿ ಬದಲಾವಣೆ ಆಗಿಲ್ಲ. ನಾನು ಅವರಷ್ಟು ಸಮಾಜವಾದಿ ಪಕ್ಷದಲ್ಲಿ ತೊಡಗಿರಲಿಲ್ಲ. ಅವರಿಗೆ ದೇಶದ ಎಲ್ಲ ಸಮಾಜವಾದಿಗಳ ನಂಟಿದೆ. ಬಿ. ಆರ್ ಪಾಟೀಲ್ ನಾವೆಲ್ಲಾ ರಾಜಕೀಯ ಚರ್ಚೆ ಮಾಡುವಾಗ ಸಿಗರೇಟ್ ಸೇದುವುದನ್ನು ಕಲಿತೆ. ಚಾರ್ಮಿನಾರ್ ಸಿಗರೇಟ್ ಸೇದುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಾನು ರಾಜಕೀಯಕ್ಕೆ ಬರಲು ನಂಜುಂಡಸ್ವಾಮಿ ಕಾರಣ, ನಮ್ಮ ವಂಶದಲ್ಲಿ ಯಾರೂ ರಾಜಕಾರಣಕ್ಕೆ ಬಂದಿರಲಿಲ್ಲ. ನಮ್ಮ ತಂದೆ ಪಂಚಾಯತಿ ಚುನಾವಣೆಯಲ್ಲಿ ನಿಂತು ಸೋತಿದ್ದರು. ಅದಕ್ಕಾಗಿ ಅವರು ಚುನಾವಣೆ ಮಾತ್ರ ಬೇಡ, ರಾಜಕೀಯ ಬಿಟ್ಟು ವಕೀಲಿಕೆ ಮಾಡಿ ಇಲ್ಲವೇ ವಾಪಸ್ ಮನೆಗೆ ಬಾ ಎಂದಿದ್ದರು. ಕಡೆಗೆ ಊರಿನವರೆಲ್ಲಾ ಸೇರಿಸಿ ತಂದೆಗೆ ಒಪ್ಪಿಸಬೇಕಾಯಿತು ಎಂದು ರಾಜಕೀಯ ಪ್ರವೇಶದ ದಿನಗಳ ಮೆಲುಕು ಹಾಕಿದರು.
1983ರಲ್ಲಿ ಚುನಾವಣೆಗೆ ನಿಂತಾಗ ಜಾರ್ಜ್ ಫರ್ನಾಂಡೀಸ್ 10 ಸಾವಿರ ಹಣ ನೀಡಿದ್ದರು. ಆಗ ಜನರೇ ಹಣ ಕೊಡುತ್ತಿದ್ದರು. ಆದರೆ ಈಗ ಬದಲಾಗಿದೆ. ಅದನ್ನೆಲ್ಲಾ ಹೇಳಲಾಗಲ್ಲ. ಈಗ ನಮ್ಮ ಮುಂದೆ ಸವಾಲಿದೆ. ಜೆಪಿ ಒಂದು ಕ್ರಾಂತಿ ಮಾಡಿದ್ದರು. ಈಗ ಮತ್ತೊಂದು ಕ್ರಾಂತಿ ಮಾಡಬೇಕಿದೆ. ರಾಜಕೀಯ ವ್ಯವಸ್ಥೆ ಬದಲಾವಣೆ ಆಗದೇ ಇದ್ದಲ್ಲಿ ಹೋರಾಟಗಾರರು ರಾಜಕಾರಣದಲ್ಲಿ ಇರುವುದು ಕಷ್ಟವಾಗಲಿದೆ ಎಂದು ಹೇಳಿದರು. ಜೆಪಿ ಪಾರ್ಕ್ನಲ್ಲಿನ ಜೆ ಪಿ ಪ್ರತಿಮೆ ತೆರವು ಪರಿಶೀಲಿಸಿ ಕೂಡಲೇ ಮರಳಿ ಸ್ಥಾಪಿಸಲು ಕ್ರಮ ವಹಿಸಲಿದ್ದೇವೆ ಎಂದು ಭರವಸೆ ನೀಡಿದರು.