ಬೆಂಗಳೂರು:ಮೊಬೈಲ್ ಫೋನ್ ಈಗ ಎಲ್ಲರ ಕೈಯಲ್ಲೂ ಇರುತ್ತೆ. ಬಹುತೇಕರು ಸೆಲ್ಫೋನ್ ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಇತ್ತೀಚೆಗೆ ಮಕ್ಕಳಿಂದ ಹಿಡಿದು ದೊಡ್ಡವರ ಕೈಯಲ್ಲೂ ಸ್ಮಾರ್ಟ್ ಫೋನ್ಗಳು ಕಂಡುಬರುತ್ತಿವೆ. ಇಲ್ಲಿ ಪೋಷಕರೇನೋ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅವರು ಕೇಳಿದಂತೆಯೇ ಸ್ಮಾರ್ಟ್ ಫೋನ್ ಅನ್ನೇ ಕೊಡಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಕ್ಕಳು ತಮಗೇ ಬೆಲೆ ಬಾಳುವ ಐಫೋನ್ ಬೇಕೆಂದು ಹಠ ಹಿಡಿದಿದ್ದರು. ಪೋಷಕರು ಅಷ್ಟೋ ಇಷ್ಟೊ ದುಡಿದು ಜೀವನ ಬಂಡಿ ಸಾಗಿಸುವುದರಿಂದ ಮಕ್ಕಳ ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಬೇಸರಗೊಂಡ ಬಾಲಕರಿಬ್ಬರು ದುಡುಕಿನ ನಿರ್ಧಾರ ಮಾಡಿ ಓದು, ಮದರಸಾ ಎಲ್ಲವನ್ನು ಬಿಟ್ಟು ಗೋವಾಕ್ಕೆ ತೆರಳಿದ್ದರು.
ಹೌದು, ಪೋಷಕರು ಐಫೋನ್ ಕೊಡಿಸಲು ನಿರಾಕರಿಸಿದರು ಎಂದು ಬೇಸರಿಸಿಕೊಂಡು ಮನೆ ಬಿಟ್ಟು ತೆರಳಿದ್ದ ಬಾಲಕರಿಬ್ಬರನ್ನು ಸಂಜಯನಗರ ಠಾಣಾ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟಂಬರ್ 1ರಂದು ಭೂಪಸಂದ್ರದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ನಾಗಶೆಟ್ಟಿಹಳ್ಳಿಯಲ್ಲಿ ಪೋಷಕರೊಂದಿಗೆ ವಾಸವಿದ್ದ ಬಾಲಕನೊಬ್ಬ ಭೂಪಸಂದ್ರದ ಮದರಸಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈ ಬಾಲಕನ ಪೋಷಕರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಪೋಷಕರು ಬಾಲಕನಿಗೆ ಒಂದು ಸ್ಮಾರ್ಟ್ ಫೋನ್ ಕೊಡಿಸಿದ್ದರು. ಈತನ ಸ್ನೇಹಿತನೂ ಸಹ ಮೊಬೈಲ್ ಬಳಕೆ ಮಾಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಹೀರಾತು, ರೀಲ್ಸ್ಗಳಲ್ಲಿ ಐಫೋನ್ ನೋಡಿದ್ದ ಈ ಬಾಲಕರಿಬ್ಬರು ತಾವೂ ಐಫೋನ್ ಖರೀದಿಸುವ ಆಲೋಚನೆ ಮಾಡಿದ್ದರು.