ಬೆಂಗಳೂರು: ಪ್ರೇಯಸಿಯ ಮೇಲೆ ಅನುಮಾನಗೊಂಡ ಆಕೆಯ ಪ್ರಿಯಕರ ಅವಳ ಬರ್ತ್ ಡೇ ಆಚರಿಸಿದ ಬಳಿಕ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿರುವ ಘಟನೆ ತಡರಾತ್ರಿ ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ನಡೆದಿದೆ. ನವ್ಯ (24) ಕೊಲೆಯಾದ ಯುವತಿ, ಪ್ರಶಾಂತ್ ಹತ್ಯೆ ಮಾಡಿರುವ ಪ್ರಿಯಕರ.
ಕನಕಪುರ ಮೂಲದ ನವ್ಯ ಹಾಗೂ ಪ್ರಶಾಂತ್ ದೂರದ ಸಂಬಂಧಿಕರಾಗಿದ್ದರು. ಕಳೆದ ಆರೇಳು ವರ್ಷಗಳಿಂದಲೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ನವ್ಯ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದರು. ಕಳೆದ ಮಂಗಳವಾರ ನವ್ಯರ ಬರ್ತ್ ಡೇ ಇತ್ತು. ಅಂದು ಸ್ವಲ್ಪ ಬ್ಯುಸಿ ಇದ್ದೇನೆಂದು ಹೇಳಿದ್ದ ಪ್ರಶಾಂತ್ ನಿನ್ನೆ ಆಕೆಯ ಬರ್ತ್ ಡೇ ಸೆಲೆಬ್ರೇಷನ್ಗೆ ಪ್ಲಾನ್ ಮಾಡಿದ್ದ. ಅದರಂತೆ ಲಗ್ಗೆರೆಯ ಮನೆಯಲ್ಲಿ ನಿನ್ನೆ ರಾತ್ರಿ ನವ್ಯಾರ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ರಾತ್ರಿ ಕೇಕ್ ಕತ್ತರಿಸಿ ತಿನ್ನಿಸಿದ್ದ ಪ್ರಶಾಂತ್, ಬಳಿಕ ಹರಿತವಾದ ಚಾಕುವಿನಿಂದ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇತ್ತೀಚಿಗೆ ನವ್ಯ ಬೇರೆ ಯುವಕನೊಂದಿಗೆ ಫೋನ್‌ನಲ್ಲಿ ಚಾಟಿಂಗ್ ಮಾಡುತ್ತಿರುತ್ತಾಳೆ ಎಂದು ಪ್ರಶಾಂತ್ ಅನುಮಾನಿಸುತ್ತಿದ್ದನಂತೆ. ಅದೇ ವಿಚಾರವಾಗಿ ಆಗಾಗ ಇಬ್ಬರ ನಡುವೆ ಜಗಳಗಳೂ ಆಗಿದ್ದವು. ಅದೇ ಕಾರಣದಿಂದ ಪ್ರಶಾಂತ್ ನವ್ಯಾರನ್ನ ಹತ್ಯೆ ಮಾಡಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನ ಬಂಧಿಸಿರುವ ರಾಜಗೋಪಾಲನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮೃತ ಯುವತಿಯ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.