ಆನೇಕಲ್: ಐಸ್ ಕ್ರೀಂ ತರಲು ಹೋದಾಗ ಟ್ರ್ಯಾಕ್ಟರ್ ಹರಿದು ಬಾಲಕ ಸಾವು ಆನೇಕಲ್ (ಬೆಂಗಳೂರು): ತಾಲೂಕಿನ ಚೆತ್ತೆಕೆರೆ ಪಾಳ್ಯ ಗ್ರಾಮದ ಇಕ್ಕಟ್ಟಿನ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಸಿಕೆ ಪಾಳ್ಯದ ಭುವನ್ (4) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಐಸ್ ಕ್ರೀಂ ತರಲು ತನ್ನ ಅಣ್ಣನೊಂದಿಗೆ ಅಂಗಡಿಗೆ ಹೊರಟಾಗ ರಸ್ತೆ ಇಕ್ಕಟ್ಟಾದ್ದರಿಂದ ಎದುರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಕಂಡು ರಸ್ತೆ ಪಕ್ಕದ ಮರಳಿನ ದಿಬ್ಬಕ್ಕೆ ಬಾಲಕ ಏರಿದ್ದಾನೆ. ನಂತರ ಬಾಲಕ ಮರಳಿನ ದಿಬ್ಬದಿಂದ ಜಾರಿ ರಸ್ತೆಗೆ ಬಂದಾಗ ಟ್ರ್ಯಾಕ್ಟರ್ನ ಹಿಂಬದಿಯ ಚಕ್ರ ಆತನ ಮೇಲೆ ಹರಿದಿದೆ.
ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ. ಇಡೀ ಘಟನೆ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸಾವು:ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನಂದರಾವ್ ಸರ್ಕಲ್ ಬಳಿ ಕಳೆದ ಭಾನುವಾರ ನಡೆದಿತ್ತು. ಹೆಬ್ಬಾಳದ ಕೆಂಪಾಪುರ ನಿವಾಸಿ ಲತಾ(55) ಎಂಬುವರು ಮೃತಪಟ್ಟಿದ್ದರು. ಲತಾ ಅವರು ತಮ್ಮ ಪತಿಯೊಂದಿಗೆ ಸ್ಕೂಟರ್ನಲ್ಲಿ ಸಾಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಗೆಜೆಟೆಡ್ ಆಫೀಸರ್ ಆಗಿದ್ದ ಲತಾ ಅವರು ಭಾನುವಾರವಾದ ಹಿನ್ನೆಲೆ ಪತಿಯೊಂದಿಗೆ ಸ್ಕೂಟರ್ ನಲ್ಲಿ ಗಾಂಧಿನಗರಕ್ಕೆ ಶಾಪಿಂಗ್ಗೆ ಬಂದಿದ್ದರು.
ಶಾಪಿಂಗ್ ಮುಗಿಸಿಕೊಂಡು ಆನಂದರಾವ್ ಸರ್ಕಲ್ ಬಳಿ ವಾಪಸಾಗುವಾಗ ಸ್ಕೂಟರ್ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿತ್ತು. ಈ ವೇಳೆ ಸ್ಕೂಟರ್ನ ಹಿಂಬದಿಯಲ್ಲಿ ಕುಳಿತಿದ್ದ ಲತಾ ಬಸ್ನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಪಘಾತದಲ್ಲಿ ಲತಾ ಅವರ ಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಘಟನೆ ಬಗ್ಗೆ ತಿಳಿದು ಉಪ್ಪಾರಪೇಟೆ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಬಳಿಕ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಘಟನೆ ಸಂಬಂಧ ಬಸ್ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೈಸೂರಿನಲ್ಲಿ ಸಂಭವಿಸಿತ್ತು ಭೀಕರ ಅಪಘಾತ:ಇತ್ತೀಚೆಗೆ ಮೇ 29 ರಂದು ಮೈಸೂರು ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿ ಬಳ್ಳಾರಿ ಜಿಲ್ಲೆಯ 10 ಮಂದಿ ಸಾವನ್ನಪ್ಪಿದ್ದರು. ಕಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಂಗನಕಲ್ಲು ಗ್ರಾಮದ 9 ಮಂದಿ ಹಾಗೂ ಕಾರಿನ ಚಾಲಕ ಸೇರಿದಂತೆ 10 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಟಿ. ನರಸೀಪುರ ಸಮೀಪದ ಕುರುಬೂರು ಗ್ರಾಮದ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಕಾರ್ ನಡುವೆ ಉಂಟಾದ ರಸ್ತೆ ಅಪಘಾತದಿಂದ ಈ ದುರಂತ ನಡೆದಿತ್ತು.
ಬಳಿಕ ಮೃತದೇಹಗಳನ್ನು ಕೆ ಆರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಗನಕಲ್ಲು ಗ್ರಾಮಕ್ಕೆ ರವಾನಿಸಲಾಗಿತ್ತು. ಅಲ್ಲಿ ಸಾಮೂಹಿಕವಾಗಿ ಎಲ್ಲರ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಲಾಗಿತ್ತು.
ಇದನ್ನೂ ಓದಿ:ಒಡಿಶಾ ರೈಲು ದುರಂತ: ಮೊದಲ FIR ದಾಖಲಿಸಿದ ಸಿಬಿಐ; ತಪ್ಪು ಸಾಬೀತಾದರೆ ಗರಿಷ್ಠ ಶಿಕ್ಷೆ ಎಷ್ಟು ಗೊತ್ತೇ!