ಬೆಂಗಳೂರು :ವಿದ್ಯಾರ್ಥಿನಿಯರ ಕೊಠಡಿ ಬಳಿ ಬಂದಿದ್ದ ಅಪ್ರಾಪ್ತ ಅಸಭ್ಯವಾಗಿ ವರ್ತಿಸಿ ಉಪಟಳ ನೀಡಿರುವ ಘಟನೆ ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 1ರ ರಾತ್ರಿ 9 ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದ ಬಿಹಾರ ಮೂಲದ ವಿದ್ಯಾರ್ಥಿನಿ ಸೇರಿದಂತೆ ಮೂವರಿಗೆ ಎದುರಾದ ಆರೋಪಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.
ಘಟನೆಯ ವಿವರ: 23 ವರ್ಷದ ಬಿಹಾರ ಮೂಲದ ವಿದ್ಯಾರ್ಥಿನಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಸದಾಶಿವನಗರದಲ್ಲಿರುವ ತಮ್ಮ ಮನೆಗೆ ಬಂದಾಗ ಬಾಲಕ ನಮ್ಮ ಮನೆಯ ಬಾಗಿಲ ಬಳಿ ನಿಂತು ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದ. ನಾವು ತಕ್ಷಣ ರೂಮ್‌ನೊಳಗೆ ಸೇರಿಕೊಂಡು ಬಾಗಿಲು ಲಾಕ್ ಮಾಡಿಕೊಂಡೆವು. ನಾವು ಆತನನ್ನು ಯಾರೆಂದು ಕೇಳಿದಾಗ ತನ್ನ ಹೆಸರು ಹೇಳಿದ್ದಾನೆ. ಬಳಿಕ ಬಾಗಿಲು ತೆರೆಯಿರಿ, ವಿಡಿಯೋ ತೋರಿಸುತ್ತೇನೆ ಎಂದಿದ್ದಾನೆ. ಬಾಗಿಲು ತೆರೆಯಲು ಆತ ಯತ್ನಿಸಿದ. ಇದರಿಂದ ಗಾಬರಿಗೊಂಡು ಸ್ನೇಹಿತರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡೆವು. ಅಷ್ಟೊತ್ತಿಗಾಗಲೇ ಸ್ಥಳದಿಂದ ಪರಾರಿಯಾಗಿದ್ದ ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.