ಕರ್ನಾಟಕ

karnataka

ETV Bharat / state

Cauvery Water: ಕಾವೇರಿ ನೀರು ವಿಚಾರದಲ್ಲಿ ಎರಡೂ ರಾಜ್ಯಗಳು ಸಂಕಷ್ಟ ಹಂಚಿಕೊಳ್ಳಬೇಕು- ಎಂ.ಬಿ.ಪಾಟೀಲ್

Minister M.P.Patil statement on Cauvery water issue: ಕರ್ನಾಟಕ- ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ವಿವಾದದ ಕುರಿತಂತೆ ಸಚಿವ ಎಂ.ಬಿ.ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Minister MB Patil
ಸಚಿವ ಎಂ ಬಿ ಪಾಟೀಲ್

By

Published : Aug 18, 2023, 3:27 PM IST

ಬೆಂಗಳೂರು: ಸಹಜವಾಗಿ ಮಳೆಯಾಗುವ ವರ್ಷದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿನ ಹಂಚಿಕೆಯೂ ಸರಾಗವಾಗಿ ನಡೆದುಕೊಂಡು ಬಂದಿದೆ. ಆದರೆ ಮಳೆ ಕಡಿಮೆಯಾಗಿರುವ ವರ್ಷಗಳಲ್ಲಿ ಎರಡೂ ರಾಜ್ಯಗಳು ಎದುರಾದ ಸಂಕಷ್ಟವನ್ನು ಕೂಡಾ ಪರಸ್ಪರ ಹಂಚಿಕೊಳ್ಳಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಸಲಹೆ ನೀಡಿದರು.

ಸದಾಶಿನಗರದಲ್ಲಿರುವ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರು ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ. ಈ ವರ್ಷ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಹೀಗಾಗಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಈ ಕುರಿತಾಗಿ ಸರ್ವಪಕ್ಷಗಳ ಸಭೆ ಕರೆಯುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನೆಲ, ಜಲ, ಭಾಷೆಯ ಪ್ರಶ್ನೆ ಬಂದಾಗ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವೆಂದು ನಮ್ಮ ಸರಕಾರ ತೀರ್ಮಾನಿಸಿದೆ. ಕಾವೇರಿ ನೀರಿನ ವಿಚಾರ ಬಂದಾಗಲೂ ಸಹ ಇಲ್ಲಿ ನಾವೆಲ್ಲರೂ ಒಂದೇ ಎಂದರು.

ಸಂಕಷ್ಟದ ವರ್ಷದಲ್ಲಿ ಆಗಿಂದಾಗ್ಗೆ ನ್ಯಾಯಾಲಯದ ಮೆಟ್ಟಿಲಿನಲ್ಲಿ ನಿಲ್ಲಬೇಕಾದ ಪ್ರಮೇಯ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ತಮಿಳುನಾಡಿನ ಅಣೆಕಟ್ಟುಗಳಲ್ಲಿನ ನೀರಿನ ಸಂಗ್ರಹ, ಅವರ ಅಚ್ಚುಕಟ್ಟು ಪ್ರದೇಶ, ಅವರಿಗೆ ಬೇಕಾದ ನೀರಿನ ಪ್ರಮಾಣ ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ನ್ಯಾ.ಫಾಲಿ ನಾರಿಮನ್‌ ಕೊಡುಗೆ ಮರೆಯುವಂತಿಲ್ಲ:ಕಾವೇರಿ ನೀರಿನ ಹಂಚಿಕೆಯ ಅಂತಿಮ ತೀರ್ಪಿನಲ್ಲಿ ನ್ಯಾಯವಾದಿ ಫಾಲಿ ನಾರಿಮನ್‌ ರಾಜ್ಯದ ಪರವಾಗಿ ವಾದಿಸಿದ್ದರು. ಆಗ ನಾನೂ ಸೇರಿದಂತೆ ಅಧಿಕಾರಿಗಳು ಅವರಿಗೆ ರಾಜ್ಯದ ಅಗತ್ಯ ಮನವರಿಕೆ ಮಾಡಿಕೊಟ್ಟೆವು. ಇದರಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ 17 ಟಿಎಂಸಿ ನೀರು ಸಿಕ್ಕಿತು. ಈ ವಿಚಾರದಲ್ಲಿ ಬೆಂಗಳೂರಿನ ಉತ್ತರ ಭಾಗವು ಕಾವೇರಿ ಕೊಳ್ಳಕ್ಕೆ ಬರುವುದಿಲ್ಲ ಎನ್ನುವ ತಮಿಳುನಾಡಿನ ವಾದ ಬಿದ್ದು ಹೋಯಿತು. ಅಂತಿಮವಾಗಿ ತೀರ್ಪಿನಲ್ಲಿ ರಾಜ್ಯಕ್ಕೆ ಲಾಭವಾಗುವಂತೆ ನೋಡಿಕೊಂಡೆವು. ಇದರಲ್ಲಿ ಯಾರು ಏನೇ ಹೇಳಲಿ, ನಾರಿಮನ್ ಅವರ ಕೊಡುಗೆಯನ್ನು ಮರೆಯುವಂತಿಲ್ಲ. ಅವರ ಶ್ರಮದಿಂದಾಗಿ ಇಂದು ಬೆಂಗಳೂರಿನ ಬಹುಭಾಗಕ್ಕೆ ಕಾವೇರಿ ನೀರು ಸಿಗುತ್ತಿದೆ ಎಂದು ಸ್ಮರಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೆಲವೊಮ್ಮೆ ರಾಜ್ಯದ ಹಿತಕ್ಕೆ ವ್ಯತಿರಿಕ್ತವಾಗಿ ಸೂಚನೆಗಳನ್ನು ನೀಡಿದೆ. ಮಳೆಯ ಕೊರತೆ ಇದ್ದಾಗ ವಸ್ತುಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅನ್ಯಾಯವಾಗುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ನೀರು ಬಿಡುಗಡೆಗೆ ಹೆಚ್​​ಡಿಕೆ ಕಿಡಿ:ಬಹುಮತದ ಸರ್ಕಾರ ಬಂದಿದೆ ಎಂದಾಕ್ಷಣ ರಾಜ್ಯದ ಜನತೆಯನ್ನು, ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಟೀಕಾಪ್ರಹಾರ ನಡೆಸಿ, ತಕ್ಷಣವೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಮೇಕೆದಾಟು ಪಾದಯಾತ್ರೆ ಹೈಡ್ರಾಮಾ ಮಾಡಿ, ಕನ್ನಡಿಗರ ತಲೆ ಮೇಲೆ ಮಕ್ಮಲ್ ಟೋಪಿ ಇಟ್ಟ ಕಾಂಗ್ರೆಸ್ ಈಗ I.N.D.I.A.ಗೆ ಜೀವದಾನ ಮಾಡಲು ರಾಜ್ಯದ ಕಾವೇರಿ ಹಿತವನ್ನೇ ಬಲಿದಾನ ಮಾಡಿದೆ. ಅಂದುಕೊಂಡಿದ್ದೇ ಆಗಿದ್ದು, ನಮ್ಮ ಭಯ ನಿಜವಾಗಿದೆ. ಕಾಂಗ್ರೆಸ್ ಸರಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ ಎಂದಿದ್ದಾರೆ.

ಇದನ್ನೂಓದಿ :ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ, ನ್ಯಾಯಾಲಯ ಆದೇಶ ಪಾಲಿಸಿದ್ದೇವೆ: ಡಿಸಿಎಂ ಡಿಕೆಶಿ

ABOUT THE AUTHOR

...view details