ಬೆಂಗಳೂರು: ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಪಕ್ಷದ ಬಗ್ಗೆ ಹೆಚ್ಚಿನ ಪ್ರೀತಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‌ಗೆ ಜನಬೆಂಬಲ ಸಿಗುತ್ತಿರುವುದನ್ನು ಗಮನಿಸಿದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತಲ್ಲಣ ಆರಂಭವಾಗಿದೆ. ನಾವು ಯಾವುದೇ ಪಕ್ಷದ ಟೀಂ ಅಲ್ಲ. ಜನತೆಯ ಟೀಂ ಆಗಿ ಕೆಲಸ ಮಾಡುತ್ತೇವೆ ಎಂದರು.
ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿರುವ ಬಜೆಟ್‌ಗೆ ಯಾವ ಮೌಲ್ಯ ಇಲ್ಲ. ಜಾತ್ರೆ ಮುಗಿದ ಮೇಲೆ ಉಳಿದ ವಸ್ತುಗಳಿಗೆ ರಿಯಾಯಿತಿ ಕೊಟ್ಟು ಬನ್ನಿ ಎಂದು ಕರಿಯುವಂತೆ ಬಜೆಟ್ ಇದೆ. ಇದೊಂದು ರಿಯಾಯಿತಿ ಬಜೆಟ್ ಅಷ್ಟೇ ಎಂದು ಲೇವಡಿ ಮಾಡಿದರು. ಚುನಾವಣೆ ಹಿನ್ನೆಲೆಯಲ್ಲಿ ಇನ್ನು ಎರಡು ತಿಂಗಳು ನಿರಂತರ ಸಭೆಗಳನ್ನು ಬಿಜೆಪಿ ಮಾಡುತ್ತದೆ. ಅಲ್ಲಿ ಕೇಂದ್ರ, ರಾಜ್ಯ ಎಂದು ದೊಡ್ಡ ನಾಯಕರ ದಂಡೇ ಇದೆ. ಆದರೂ ಯಾವುದೇ ಉಪಯೋಗ ಇಲ್ಲ. ಜನತಾದಳ ಜನರ ಹೃದಯಕ್ಕೆ ಹೋಗಿದೆ ಎಂದು ಹೇಳಿದರು.
ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಕೇವಲ ಚುನಾವಣಾ ಗಿಮಿಕ್. ರಾಮನಗರದಲ್ಲಿ ಸ್ಥಳ ಗುರುತು ಆಗಿಲ್ಲ. ಕೆಲವು ಅರಣ್ಯ ಜಾಗ ಇದೆ. ಅದನ್ನೆಲ್ಲಾ ಕ್ಲಿಯರ್ ಮಾಡಿಕೊಂಡು ಬರಬೇಕಿದೆ. ಮೂರು ವರ್ಷದ ಹಿಂದೆ ನಿರ್ಮಿಸಿದ್ದರೆ ಅಭಿನಂದನೆ ಮಾಡಬಹುದಿತ್ತು. ಚುನಾವಣೆಗೆ ಒಂದು ತಿಂಗಳು ಇದೆ. ಒಂದು ತಿಂಗಳಲ್ಲಿ ಏನು ಮಾಡುತ್ತಾರೆ. ಕಾಟಾಚಾರಕ್ಕೆ ಗುದ್ದಲಿ ಪೂಜೆ ಮಾಡುತ್ತಾರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಇನ್ನು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನನ್ನ ಕೂಸು. 2006 ರಲ್ಲಿಯೇ ವೈದ್ಯಕೀಯ, ನರ್ಸಿಂಗ್, ಆಸ್ಪತ್ರೆಯ ನೀಲನಕ್ಷೆ ಮಾಡಿದ್ದೆ. ಆಗ ಕೆಲವು ಜಮೀನಿನ ಸಮಸ್ಯೆ ಎದುರಾಗಿತ್ತು. ಅಲ್ಲದೇ, ವಿಶ್ವವಿದ್ಯಾಲಯದಲ್ಲಿ ಹಣ ಏನಿದೆ ಎಂದು ತಕರಾರು ಮಾಡಲಾಯಿತು. ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಾಡಲು ಪ್ರಯತ್ನ ಪಟ್ಟರೂ ಆಗಲಿಲ್ಲ. ಇದೇ ಬಿಜೆಪಿಯವರು ರಾಜ್ಯಪಾಲರಿಂದ ಮತ್ತು ಸಿಂಡಿಕೇಟ್‌ನಿಂದ ಅಡ್ಡಗಾಲು ಹಾಕಿಸಿದ್ದರು. ಈಗ ತರಾತುರಿಯಲ್ಲಿ 600 ಕೋಟಿ ರೂ. ಕಟ್ಟಡ ನಿರ್ಮಿಸಲು ವರ್ಗಾವಣೆ ಮಾಡಿದ್ದಾರೆ.
ಮೊದಲು 300 ರೂ. ಬಿಡುಗಡೆ ಮಾಡುತ್ತಿದ್ದಾರೆ. 24 ಗಂಟೆಯಲ್ಲಿ ಹಣ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆ ಮಾಡಲು ತಿಳಿಸಿದ್ದಾರೆ. ಇದರ ಗುದ್ದಲಿ ಪೂಜೆಗೆ ತರಾತುರಿಯಲ್ಲಿ ಪ್ರಧಾನಿಯವರನ್ನು ಕರೆಸುತ್ತಾರೋ ಗೊತ್ತಿಲ್ಲ. ಬಿಜೆಪಿಯದ್ದು ಇದೆಲ್ಲಾ ಚುನಾವಣೆ ಗಿಮಿಕ್ ಅಷ್ಟೇ. ಇದಕ್ಕೆಲ್ಲಾ ಮನ್ನಣೆ ನೀಡಬೇಕಾದ ಅಗತ್ಯ ಇಲ್ಲ ಎಂದು ಹೇಳಿದರು.
ಹೆಚ್ಡಿ ದೇವೇಗೌಡರ ಕುಂಟುಂಬದಿಂದ ವಿಶೇಷ ಪೂಜೆ ದೇವೇಗೌಡ ದಂಪತಿ ಪೂಜೆ :ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ಅವರು ಜೆಪಿ ನಗರದ ತಿರುಮಲಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ತ್ರಾಂಬಕೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುಟುಂಬ ಭಾಗವಹಿಸಿತ್ತು.
ಇದನ್ನೂ ಓದಿ:ಈ ಬಜೆಟ್‌ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್ಡಿಕೆ