ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿವಿಧೆಡೆ ಬೂಸ್ಟರ್ ಡೋಸ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕಲಬುರಗಿ: ಲಸಿಕೆ ಕಾರ್ಯಕ್ರಮಕ್ಕೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಚಾಲನೆ ನೀಡಿದರು. ನಗರದ ಅಶೋಕ ನಗರ ಬಡಾವಣೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್ ಹಾಗೂ ಹಿರಿಯ ನಾಗರಿಕರಿಗೆ ಲಸಿಕೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೊಪ್ಪಳ: ಕೊಮಾರ್ಬಿಡಿಟಿಸ್ ಇದ್ದವರಿಗೆ ಬೂಸ್ಟರ್ ಡೋಸ್ ನೀಡುವುದಕ್ಕೆ ಕೊಪ್ಪಳದಲ್ಲಿಯೂ ಇಂದು ಚಾಲನೆ ಸಿಕ್ಕಿದೆ. ಕಾರ್ಯಕ್ರಮಕ್ಕೆ ಸಚಿವ ಹಾಲಪ್ಪ ಆಚಾರ್ ಅವರು ಚಾಲನೆ ನೀಡಿದ್ದಾರೆ. ಜಿಲ್ಲೆಯ 4116 ಆರೋಗ್ಯ ಕಾರ್ಯಕರ್ತೆಯರು, 2426 ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಯೋಜಿಸಲಾಗಿದೆ. ಇದರ ಜೊತೆಗೆ 60 ವರ್ಷ ಮೇಲ್ಪಟ್ಟ 88 ಜನ ಅರ್ಹರಿಗೂ ಲಸಿಕೆ ನೀಡಲಾಗುತ್ತಿದೆ. ಅಲ್ಲದೆ ಕೊಮಾರ್ಬಿಡಿಟಿಸ್ ಇರುವ ವೃದ್ಧರಿಗೂ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಬೂಸ್ಟರ್ ಡೋಸ್ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಹುಬ್ಬಳ್ಳಿ: ಕೋವಿಡ್ ನಿಯಂತ್ರಣಕ್ಕೆ ನಡೆಯುತ್ತಿರುವ ಉಚಿತ ಲಸಿಕಾ ಅಭಿಯಾನ ಧಾರವಾಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಕೈಮಗ್ಗ,ಜವಳಿ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು.
ಜಿಲ್ಲಾಡಳಿತ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಮುನೇನಕೊಪ್ಪ, ಜಿಲ್ಲೆಯಲ್ಲಿ ಸುಮಾರು 16 ಸಾವಿರ ಕೋವಿಡ್ ಮುನ್ನೆಚ್ಚರಿಕೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಭಾರತವು ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶದ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ಇಡೀ ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಕಾರ್ಯ ಸಾಗಿದೆ. ಈಗಾಗಲೇ ಸುಮಾರು 150 ಕೋಟಿ ಡೋಸ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ. ಸಂಭಾವ್ಯ ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಾಣುವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯ ಕರ್ಫ್ಯೂಗೆ ಜಿಲ್ಲೆಯ ಜನತೆ ಸಹಕರಿಸಿದ್ದಾರೆ ಎಂದು ಹೇಳಿದರು.
ದಾವಣಗೆರೆ: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೊರೊನಾ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡುವಂತೆ ಆದೇಶಿಸಿದ ಬೆನ್ನಲ್ಲೇ ದಾವಣಗೆರೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಫ್ರಂಟ್ ಲೈನ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಲಾಯಿತು. ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೂಸ್ಟರ್ ಡೋಸ್ ನೀಡಲಾಯಿತು.