ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿದರು. ಬೆಂಗಳೂರು:ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದ ಪಾಲಿಗೆ ಶಕುನಿ ಆಗಿದ್ದಾರೆ. ಅವರು ರಾಜ್ಯದ ಜನರಿಗೆ ಮೋಸ ಮಾಡಲು ಶಕುನಿದಾಳ ಉರುಳಿಸಿದ್ದಾರೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಜತೆಗೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ರಾಜ್ಯ ಬಿಜೆಪಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯಿಂದ ರಾಜ್ಯದ ಪಾಂಡವರನ್ನು ಸೋಲಿಸಲು ಸಾಧ್ಯವಿಲ್ಲ. ಪರಸ್ಪರ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಜಗಳ ಸೃಷ್ಟಿಸುವ ಸರ್ಕಾರ ಇದಾಗಿದೆ ಎಂದು ಅಪಾದನೆ ಮಾಡಿದರು.
ಸರ್ಕಾರದಿಂದ ವಂಚನೆ ಕೆಲಸ- ಸುರ್ಜೇವಾಲಾ.. ಈ ಸರ್ಕಾರ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನರು, ಪರಿಶಿಷ್ಟ ಜಾತಿ ಹಾಗೂ ಪಂಗಡದವರನ್ನು ವಂಚಿಸುವ ಕೆಲಸ ಮಾಡುತ್ತಿದೆ. ಎಲ್ಲರನ್ನೂ ವಂಚಿಸಿ ಮೋಸಗೊಳಿಸುವುದು ಬಸವರಾಜ ಬೊಮ್ಮಾಯಿ ಕಾರ್ಯ ಆಗಿದೆ. ಸ್ವಾತಂತ್ರ್ಯ ನಂತರ ನಾನು ಕಂಡಂತೆ 75 ವರ್ಷದಲ್ಲಿ ಮೀಸಲಾತಿಯನ್ನು ನೀಡಿ, ಬದಲಿಸಿ ಹಾಗೂ ಮತ್ತೆ ನೀಡುವ ಕಾರ್ಯವನ್ನು ಕೇವಲ 90 ದಿನದ ಕಾಲಾವಧಿಯಲ್ಲಿ ಮಾಡಿದ್ದನ್ನು ನೋಡಿಲ್ಲ ಎಂದು ಆಕ್ಷೇಪಿಸಿದರು.
ಎಲ್ಲರಿಗೂ ಒಳಿತು ಮಾಡಿದಂತೆ ತೋರಿಸುವುದು, ಎತ್ತಿ ಕಟ್ಟುವುದು, ಪರಸ್ಪರ ಸಮುದಾಯಗಳ ನಡುವೆ ಕಿತ್ತಾಟ ತಂದಿಡುವ ಕೆಲಸ ಮಾಡಿದ ವಂಚನೆಯ ಸರ್ಕಾರ ಇದಾಗಿದೆ. ಕೇವಲ ತಮ್ಮ ಲೂಟಿಯನ್ನು ಮರೆಮಾಚಲು, ಗಮನ ಬೇರೆಡೆ ಸೆಳೆಯಲು ವ್ಯವಸ್ಥಿತವಾಗಿ ಈ ರೀತಿಯ ಬದಲಾವಣೆ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಇದರಿಂದಾಗಿ ಇದನ್ನು ಬಿಟ್ರೇಯಲ್ ಜನತಾ ಪಾರ್ಟಿ ಎಂದು ಹೇಳಿಕೊಳ್ಳಲು ನಿಜಕ್ಕೂ ಅರ್ಹ ಎಂದು ತಿಳಿಸಿದರು.
ಮೂರು ಸಾರಿ ಮೀಸಲಾತಿ ಬದಲಿಸಿ ಜನರ ದಿಕ್ಕು ತಪ್ಪಿಸಿರುವ ಸರ್ಕಾರ ಯಾಕೆ ನ್ಯಾ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಯಾಕೆ ನಾಲ್ಕು ವರ್ಷ ಕಾಲ ಜಾರಿಗೆ ತಂದಿಲ್ಲ. ವಿಧಾನಸಭೆ ಅಧಿವೇಶನ ಕಡೆಯ ದಿನ ಮೀಸಲಾತಿಯನ್ನು ಹೆಚ್ಚಿಸಿ ಅಧಿವೇಶನ ಮುಗಿಸಿದೆ.
9ನೇ ಷಡ್ಯೂಲ್ಗೆ ಸೇರಿಸದೇ ಜಾರಿ ಹೇಗೆ ಸಾಧ್ಯ- ಸುರ್ಜೇವಾಲಾ: ಇದರಿಂದ ಆಗುವ ಪ್ರಯೋಜನ ಏನು? 9ನೇ ಷಡ್ಯೂಲ್ಗೆ ಸೇರಿಸದೇ ಜಾರಿಗೆ ತರಲು ಹೇಗೆ ಸಾಧ್ಯ? ಮೂರು ತಿಂಗಳ ಕಾಲಾವಧಿಯಲ್ಲಿ ಮೀಸಲಾತಿಯ ಪ್ರಸ್ತಾಪವನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಲ್ಲ. ಅಂತಿಮವಾಗಿ ಕಳೆದ ವಾರ ನರೇಂದ್ರ ಮೋದಿ ಸರ್ಕಾರ ಸರ್ಕಾರ ಮನವಿಯನ್ನೇ ಸಲ್ಲಿಸಿಲ್ಲ ಎಂದಾಗ, ಈಗ ತರಾತುರಿಯಿಂದ ಕಾರ್ಯಪ್ರವೃತ್ತವಾಗಿದೆ. ಮೀಸಲಾತಿಯನ್ನು ಒಂದಿಷ್ಟು ಬದಲಿಸಿದೆ. ಆದರೆ ಇದರಿಂದ ಪ್ರಯೋಜನ ಇಲ್ಲ. ಜಾರಿಗೆ ಬರುವುದು ಸಾಧ್ಯವೇ ಇಲ್ಲ ಎಂದು ಹೇಳಿದರು.
ಈ ಸಂಪುಟದ ಕಡೆಯ ಸಚಿವ ಸಂಪುಟ ಸಭೆಯಲ್ಲಿ ಸಂಪೂರ್ಣ ಮೀಸಲಾತಿಯನ್ನು ಬದಲಿಸಿ ಎಲ್ಲಾ ಕೆಟಗರಿಯನ್ನು ಬದಲಿಸಿದರು. ಇದು ಕಾನೂನುರಿತ್ಯಾ ಸಮರ್ಪಕವಾಗಿರಲಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ನಡೆಸಿದ ಪ್ರಯತ್ನ. ಇದು ಕನ್ನಡಿಗರ ಬುದ್ಧಿಮತ್ತೆ, ಸಂವಿಧಾನಕ್ಕೆ ಮಾಡಿದ ಅವಮಾನ ಆಗಿದೆ ಎಂದರು.
ಐದು ಪ್ರಶ್ನೆ ಕೇಳಲು ಬಯಸುತ್ತೇನೆ. ಮೋದಿ ಸರ್ಕಾರ ತಿರಸ್ಕರಿಸಿದ ನಂತರ ಶೇ.55 ರಷ್ಟು ಮೀಸಲಾತಿ ಹೇಗೆ ಅಳವಡಿಸುತ್ತೀರಿ? ಕಾನೂನು ಸಹಕಾರ ಇದಕ್ಕೆ ಸಿಗುತ್ತದೆಯೇ? ಒಂದೊಮ್ಮೆ ಕಾನೂನು ಮೀರಿ ಮೀಸಲಾತಿ ಜಾರಿಗೆ ತರಲು ಮುಂದಾದರೆ ಇದು ತಿರಸ್ಕೃತವಾಗಲಿದೆ. ಇದರಿಂದ ಯಾವುದೇ ಸರ್ವೆ, ಅಧ್ಯಯನ ಇಲ್ಲವೇ ಹಿಂದುಳಿದ ವರ್ಗದ ಕಮೀಷನ್ನ ಮಾರ್ಗದರ್ಶನ ಪಡೆಯದೇ ಮೀಸಲಾತಿ ಘೋಷಿಸಿದೆ ಎಂದು ವಿವಿರಣೆ ನೀಡಿದರು.
ಮರಾಠ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು: ಹಿಂದುಳಿದ ವರ್ಗಗಳ ಆಯೋಗದ ವರದಿ ಜಾರಿಗೆ ಬಂದ ಮೇಲೆ ಬೊಮ್ಮಾಯಿ ಸರ್ಕಾರ ಮೀಸಲಾತಿಯನ್ನು ಮೂರು ಸಾರಿ ಬದಲಿಸಿದೆ. ಈ ಹಿಂದೆ ಮರಾಠ ಮೀಸಲಾತಿಯನ್ನು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿತ್ತು. ಇದನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದು ಗೊತ್ತಿದ್ದೂ ತಾವು ಮೀಸಲಾತಿ ಪರಿವರ್ತಿಸುವ ಕಾರ್ಯ ಮಾಡಿದ್ದೀರಿ? ಎಸ್ಸಿ, ಎಸ್ಟಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ನಂತರವೂ ಮೀಸಲಾತಿ ಘೋಷಿಸುವ ಅಗತ್ಯ ಏನಿತ್ತು? ಎಂದು ಸುರ್ಜೇವಾಲಾ ಪ್ರಶ್ನಿಸಿದರು.
ಮುಸ್ಲಿಂ ಕೋಟಾವನ್ನು ಬೇರೆ ವರ್ಗಗಳಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಈ ಕೋಟಾಗೆ ಯಾರನ್ನೂ ಸೇರಿಸಲಾಗದು, ಇದನ್ನು ಬೇರೆಯವರಿಗೆ ನೀಡಲಾಗದು. ಹೇಗೆ ನೀವು ಮಾಡಿದ್ದೀರಿ ಎಂಬ ಪ್ರಶ್ನೆ ಕೇಳುತ್ತಿದ್ದೇನೆ. ಇದಕ್ಕೆ ರಾಜ್ಯ ಸರ್ಕಾರ ಅಥವಾ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇದನ್ನೂಓದಿ:ಮೀಸಲಾತಿ ವಿಚಾರ.. ಡಿಕೆಶಿ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ಯತ್ನಾಳ್