ಬೆಂಗಳೂರು: ರಾಜ್ಯ ಬಜೆಟ್ಗೆ ದಿನಗಣನೆ ಆರಂಭವಾಗಿದೆ. ಚೊಚ್ಚಲ ಬಜೆಟ್ ಮಂಡಿಸಲಿರುವ ಸಿಎಂ ಬಸವರಾಜ ಬೊಮ್ಮಾಯಿ ಜೋಳಿಗೆಯಲ್ಲಿ ಈ ಬಾರಿ ನೀರಾವರಿ ಕ್ಷೇತ್ರಕ್ಕೆ ಭರಪೂರ ಕೊಡುಗೆ ಸಿಗುವ ನಿರೀಕ್ಷೆ ಇದೆ. ನೀರಾವರಿ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಬೊಮ್ಮಾಯಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲೇಬೇಕಾದ ಒತ್ತಡದಲ್ಲಿದ್ದು, ರಾಜ್ಯದ ರೈತಾಪಿ ಸಮುದಾಯ ಇದೀಗ ಬಜೆಟ್ಅನ್ನು ಎದುರು ನೋಡುತ್ತಿದೆ.
ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ನ್ಯಾಯಾಧೀಕರಣ 130 ಟಿಎಂಸಿ ಅಡಿ ನೀರ ಸಂಗ್ರಹಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.256 ಮೀಟರ್ಗೆ ಎತ್ತರಿಸಲು ಅನುಮತಿ ಸಿಕ್ಕಿದೆ. 15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ. ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕಿದೆ. ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ ಸೇರಿ ಏಳು ಜಿಲ್ಲೆಗಳಿಗೆ ನೀರಾವರಿ ಆಗುವ ಯೋಜನೆಯಾಗಿದೆ. 2017 ರಲ್ಲಿ ಪರಿಷ್ಕೃತ ಅಂದಾಜ 52 ಸಾವಿರ ಕೋಟಿಯಿದ್ದು, ಇವತ್ತಿನ ಲೆಕ್ಕಕ್ಕೆ 65 ಸಾವಿರ ಕೋಟಿ ರೂ. ಆಗಿದೆ. ಇದನ್ನು ವಿಳಂಬ ಮಾಡುತ್ತಾ ಹೋದರೆ ಲಕ್ಷ ಕೋಟಿ ಆಗಲಿದೆ. ಹಾಗಾಗಿ ತ್ವರಿತವಾಗಿ ಯೋಜನೆ ಮುಗಿಸಬೇಕು ಎನ್ನುವ ಒತ್ತಡ ರಾಜ್ಯ ಸರ್ಕಾರದ ಮೇಲಿದ್ದು, ಇದು ಸಿಎಂ ಬೊಮ್ಮಾಯಿ ಅವರಿಗೂ ಬಹು ದೊಡ್ಡ ಸವಾಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ, ರಾಷ್ಟ್ರದಲ್ಲೇ ಅತಿ ದೊಡ್ಡ ಯೋಜನೆಯಾಗಿದೆ. ಮೂರೂ ಹಂತದ ಯೋಜನೆ ಸೇರಿದಂತೆ 30 ಲಕ್ಷ ಎಕರೆ ನೀರಾವರಿ ಆಗಲಿದೆ, ಇದರಿಂದ ಉತ್ತರ ಕರ್ನಾಟಕದ ಅಸಮತೋಲನ ತಪ್ಪಿಸಬಹುದಾಗಿದೆ. ಮೂರನೇ ಹಂತದ ಯೋಜನೆಗೆ 1.30 ಲಕ್ಷ ಎಕರೆ ಜಮೀನು, 20 ಹಳ್ಳಿಗಳನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ, ಅದಕ್ಕಾಗಿ ಪುನರ್ವಸತಿ ಕೇಂದ್ರ ರಚಿಸಬೇಕಿದೆ. ಇದರ ಜೊತೆಗೆ ಮೂರನೇ ಹಂತದ ಯೋಜನೆ ಜಾರಿಗೆ ರಚಿಸಲಾಗಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ಆಯುಕ್ತರು ಸೇರಿ 850 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 460 ಹುದ್ದೆಗಳು ಖಾಲಿ ಇವೆ. ಇವನ್ನೂ ಭರ್ತಿ ಮಾಡಿಕೊಳ್ಳಬೇಕಿದೆ. ಇದನ್ನು ಬಜೆಟ್ನಲ್ಲಿ ಸೇರಿಸಲಾಗುತ್ತದೆ ಎನ್ನಲಾಗ್ತಿದೆ.
ಅನುದಾನದ ಅಗತ್ಯತೆ..ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದಲ್ಲಿ ಆಲಮಟ್ಟಿ ಜಲಾಶಯವನ್ನು ಎತ್ತರಿಸಲು 1.25 ಲಕ್ಷ ಕೋಟಿ ಅಗತ್ಯವಿದೆ. 20 ಗ್ರಾಮಗಳ ಸ್ಥಳಾಂತರಿಸಿ ಅವರಿಗೆ ಪುನರ್ವಸತಿ ಕಲ್ಪಿಸಲು, ಭೂ ಸ್ವಾಧೀನ ಪಡಿಸಿಕೊಳ್ಳಲು ಸದ್ಯ 2 ಸಾವಿರ ಕೋಟಿ ರೂ. ಕೊಡಲಾಗಿದೆ. ಆದರೆ, ಇದು ಸಾಲುವುದಿಲ್ಲ. ಇದಕ್ಕೆ ಬಜೆಟ್ ನಲ್ಲಿ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕಿದೆ. ಮೂರನೇ ಹಂತದ ಯೋಜನೆಗೆ ನೋಟಿಫಿಕೇಷನ್ ಆದ ತಕ್ಷಣ ಅದರ ಅನುಷ್ಠಾನಕ್ಕೆ ಬೇಕಾದ ಸೌಲಭ್ಯ ಕಲ್ಪಿಸುವ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡಬೇಕಿದೆ. ಅಗತ್ಯ ಕಾಲುವೆಗಳು, ನೀರಿನ ವಿತರಣೆ ಜಾಲ, ಪುನರ್ವಸತಿ ಇತ್ಯಾದಿಗಳಿಗೆ ಹಣಕಾಸು ಸೌಲಭ್ಯ ಘೋಷಿಸಬೇಕಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಅನುಭವ ಇರುವ ಜೊತೆಗೆ ಸ್ವತಃ ಇಂಜಿನಿಯರ್ ಕೂಡ ಆಗಿರುವ ಬೊಮ್ಮಾಯಿ ಈಗ ಮುಖ್ಯಮಂತ್ರಿ ಆಗಿರುವ ಹಿನ್ನೆಲೆಯಲ್ಲಿ ಆದ್ಯತೆಯಾಗಿ ಪರಿಗಣಿಸಿ ಯುಕೆಪಿ ಮೂರನೇ ಹಂತದ ನೀರಿನ ಬಳಕೆಗೆ ಅನುವಾಗುವಂತೆ ಅಗತ್ಯ ಅನುದಾನವನ್ನು ಸಿಎಂ ಬಜೆಟ್ ನಲ್ಲಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.
ಮೇಕೆದಾಟಿಗೆ ಅನುದಾನ..ಬಹು ನಿರೀಕ್ಷಿತ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ, ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ತೆಗೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ತರಬೇಕಿದೆ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಎರಡನ್ನೂ ನೀರಾವರಿ ಕ್ಷೇತ್ರದಲ್ಲಿ ಸಮತೋಲನ ಮಾಡಬೇಕಿದೆ. ಅಲ್ಲದೆ, ಈಗ ಕಾಂಗ್ರೆಸ್ನವರು ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿದ್ದಾರೆ. ಹಾಗಾಗಿ ಬಿಜೆಪಿಗೆ ಈ ಯೋಜನೆ ಪ್ರಮುಖವಾಗಿದ್ದು, ಯೋಜನೆ ಜಾರಿಗೆ ಪೂರಕವಾಗಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಬೇಕಿದೆ.
ಈಗಾಗಲೇ ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯನ್ನು ಕಾವೇರಿ ನದಿಗೆ ಅಡ್ಡಲಾಗಿ ಆರ್ಕಾವತಿ ಹಾಗೂ ಕಾವೇರಿ ನದಿಯ ಸಂಗಮದ ಸಮೀಪದಲ್ಲಿ ನಿರ್ಮಿಸಿ, 67.16 ಟಿ.ಎಂ.ಸಿ ನೀರನ್ನು ಶೇಖರಿಸಲು ರೂ.9000 ಕೋಟಿ ಮೊತ್ತದ ಡಿ.ಪಿ.ಆರ್ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಕೇಂದ್ರ ಸರ್ಕಾರದ ವಿವಿಧ ನಿರ್ದೇಶನಾಲಯಗಳಲ್ಲಿ ಪರಿಶೀಲನೆಯಲ್ಲಿದೆ. ಕಾವೇರಿ ನ್ಯಾಯಾಧೀಕರಣದ ದಿನಾಂಕ 05-02-2007 ರ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದ ದಿನಾಂಕ 16-02-2018ರ ಆದೇಶದಲ್ಲಿ ಮಾರ್ಪಡಿಸಿರುವಂತೆ ತಮಿಳುನಾಡು ರಾಜ್ಯಕ್ಕೆ ಸಾಮಾನ್ಯ ಮಳೆ ವರ್ಷದಲ್ಲಿ 177.25 ಟಿ.ಎಂ.ಸಿ ನೀರನ್ನು ಮಾಸಿಕವಾರು ನಿಯಂತ್ರಿಸಲು. ಸರ್ವೋಚ್ಛ ನ್ಯಾಯಾಲಯದಿಂದ ಹಂಚಿಕೆಯಾಗಿರುವ 4.75 ಟಿ.ಎಂ.ಸಿ ನೀರನ್ನು ಬೆಂಗಳೂರು ನಗರವೂ ಸೇರಿದಂತೆ ಕುಡಿಯುವ ಹಾಗೂ ಗೃಹೋಪಯೋಗಿ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲು. 400 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲು ಈ ಯೋಜನೆ ಕೈಗಳ್ಳಲಾಗುತ್ತಿದೆ. ಈಗ ಯೋಜನೆಗೆ ಅಗತ್ಯ ಅನುದಾನ ಮೀಸಲಿರಿಸಬೇಕಿದೆ.