ಕರ್ನಾಟಕ

karnataka

ETV Bharat / state

ತಮಿಳುನಾಡಿಗೆ ಕಾವೇರಿ ನೀರು: ಪಾಲಿಸಲು ಸಾಧ್ಯವಿಲ್ಲದ ಆಜ್ಞೆ- ಬಸವರಾಜ ಬೊಮ್ಮಾಯಿ - Cauvery water

ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನೀಡಿರುವ ಆದೇಶವು ಪಾಲನೆ ಮಾಡಲು ಸಾಧ್ಯವಿಲ್ಲದ ಆಜ್ಞೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Sep 19, 2023, 7:20 AM IST

ಬೆಂಗಳೂರು:"ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲುಆರ್​ಸಿ) ಆದೇಶದಂತೆ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿರುವುದು ಪಾಲಿಸಲು ಸಾಧ್ಯವಿಲ್ಲದ ಒಂದು ಆಜ್ಞೆಯಾಗಿದೆ" ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯ ತಿಳಿಸಿದರು.

ರಾಜ್ಯ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್​ಗೆ ಹೋಗಿ ನೀರು ಬಿಡಲು ಸಾಧ್ಯವಿಲ್ಲದ ಕಾರಣಗಳನ್ನು ಮನವರಿಕೆ ಮಾಡಿಕೊಡಬೇಕು. ಈ ಆಜ್ಞೆ ಬರುವ ಮುಂಚೆ ನೀರು ಬಿಡಲು ಪ್ರಾರಂಭಿಸಿರುವ ರಾಜ್ಯ ಸರ್ಕಾರ ತನ್ನ ಕೈಯನ್ನು ತಾನೇ ಕಟ್ಟಿಸಿಕೊಂಡಿದೆ. ಕೂಡಲೇ ನೀರು ನಿಲ್ಲಿಸಿ ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯದ ಜನತೆಗೆ ನ್ಯಾಯ ಒದಗಿಸಲು ಕಾನೂನಾತ್ಮಕ ಹೋರಾಟ ಮಾಡಬೇಕು ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ದಕ್ಷಿಣಮುಖ ನಂದಿ ತೀರ್ಥ ಕಲ್ಯಾಣಿ ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಸಿಎಂ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರ ಎತ್ತಿ ಹಿಡಿದ ಸಿಡಬ್ಲ್ಯುಎಂಎ: ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​ ನೀರು ಬಿಡುವಂತೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸೋಮವಾರ ಎತ್ತಿ ಹಿಡಿದಿದೆ. ಸೋಮವಾರ ನಡೆದ ಸಭೆಯಲ್ಲಿ ಸೆಪ್ಟೆಂಬರ್ 13ರಿಂದ ಅನ್ವಯವಾಗುವಂತೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯೂಸೆಕ್​​ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕು ಎಂದು ಆದೇಶಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಈ ಬಗ್ಗೆ ಮುಂದಿನ ಸಭೆಯನ್ನು ಸೆಪ್ಟೆಂಬರ್​ 26ಕ್ಕೆ ನಡೆಸಲಾಗುವುದು ಎಂದಿದೆ.

ಈಗಾಗಲೇ ಮಳೆ ಕೊರತೆಯಿಂದಾಗಿ ಕೆಆರ್​ಎಸ್ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇದ್ದು, ನೀರು ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಬಂದೊದಗಲಿದೆ. ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ, ಬರದ ತೀವ್ರತೆ ಹೆಚ್ಚುತ್ತಿದೆ. ಕುಡಿಯುವ ನೀರಿನ ಅಗತ್ಯತೆಗೂ ಸಮಸ್ಯೆಯಾಗಲಿದೆ. ಜಲಾಶಯಗಳ ಒಳಹರಿವು ಸುಧಾರಿಸದ ಹೊರತು ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕ ಪ್ರಾಧಿಕಾರಕ್ಕೆ ವಾದ ಸಲ್ಲಿಸಿತ್ತು.

ಆದರೆ, ಸಭೆಯಲ್ಲಿ ತಮಿಳುನಾಡು ಮುಂದಿನ 15 ದಿನಗಳವರೆಗೆ ಬಾಕಿ ಇರುವ 6500 ಕ್ಯೂಸೆಕ್ ಸೇರಿದಂತೆ ಒಟ್ಟು 12,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು. ನಿತ್ಯ ಬಿಟ್ಟ 5 ಸಾವಿರ ಕ್ಯೂಸೆಕ್ ನೀರು ಬಿಳಿಗುಂಡ್ಲು ಅಣೆಕಟ್ಟೆ ಸೇರಿದ್ದನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿತ್ತು. ಕೊನೆಗೆ, ತಮಿಳುನಾಡಿನ ವಾದಕ್ಕೆ ಮನ್ನಣೆ ನೀಡಿದ ಪ್ರಾಧಿಕಾರ, ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನೇ ಎತ್ತಿ ಹಿಡಿದು ಪ್ರತಿದಿನ 15 ದಿನಗಳವರೆಗೆ 5 ಸಾವಿರ ಕ್ಯೂಸೆಕ್​​ ನೀರು ಹರಿಸಿ ಎಂದು ಅಂತಿಮ ಆದೇಶ ನೀಡಿತು. ಕಾವೇರಿ ಹಾಗೂ ಕೃಷ್ಣಾ ಕಣಿವೆಯಲ್ಲಿ ಭಾರಿ ನೀರಿನ ಕೊರತೆ ಕಾಣಿಸಿಕೊಂಡಿದ್ದು, ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ.

ಇದನ್ನೂ ಓದಿ:ಪ್ರಾಧಿಕಾರದ ಆದೇಶಕ್ಕೆ ರೈತರ ಕಪ್ಪು ಬಾವುಟ ಪ್ರದರ್ಶನ.. ಕಾವೇರಿ ನದಿಗಿಳಿದು ರೈತರ ಪ್ರತಿಭಟನೆ

ABOUT THE AUTHOR

...view details