ಬೆಂಗಳೂರು: ಬಿಎಂಆರ್ಸಿಎಲ್ನಲ್ಲಿ ಹುದ್ದೆಗಳ ಭರ್ತಿ ಅಧಿಕಾರವನ್ನು ನಿರ್ದೇಶಕರ ಬದಲು ವ್ಯವಸ್ಥಾಪಕ ನಿರ್ದೇಶಕರಿಗೆ ವಹಿಸಲಾಗುತ್ತದೆ ಮತ್ತು ಕನ್ನಡಿಗರಿಗೆ ಆದ್ಯತೆ ನೀಡುವಂತೆ ನಿರ್ದೇಶನ ನೀಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ನಮ್ಮ ಮೆಟ್ರೋ ಸಿಬ್ಬಂದಿ ನೇಮಕಾತಿಯಲ್ಲಿ ಕನ್ನಡಿಗರ ಕಡೆಗಣನೆ ಕುರಿತು ಸದಸ್ಯ ಕಾಂತರಾಜ್ ಸರ್ಕಾರವನ್ನು ಪ್ರಶ್ನಿಸಿದರು. ಬಿಎಂಆರ್‌ಸಿಎಲ್ ಬದಲು ಕನ್ನಡಿಗರ ವಿರೋಧಿ ಮೆಟ್ರೋ ರೈಲು ಕಾರ್ಪೊರೇಷನ್ ಅಂತಾ ಹೆಸರುಬಿಡಬೇಕು. ಕೀ ಪೋಸ್ಟ್ನಲ್ಲಿ ಹೊರ ರಾಜ್ಯದವರು ಇದ್ದಾರೆ. ಅವರು ಕನ್ನಡಿಗರಿಗೆ ಆದ್ಯತೆ ನೀಡುತ್ತಿಲ್ಲ. ಗುತ್ತಿಗೆ ಆಧಾರಿತ ನೇಮಕಾತಿಯಲ್ಲೂ ಕನ್ನಡಿಗರನ್ನು ಪರಿಗಣಿಸಬೇಕು. ಟಿಕೆಟ್ ಕೌಂಟರ್ನಲ್ಲಿಯೂ ಕನ್ನಡ ಮಾತನಾಡುವವರಿಲ್ಲದಾಗಿದೆ. ಕನ್ನಡಿಗರನ್ನು ಟಾರ್ಗೆಟ್ ಮಾಡಿ ತೆಗೆದುಹಾಕಿದ್ದಾರೆ. 22 ಕೀ ಪೋಸ್ಟ್ನಲ್ಲಿ 21 ಮಂದಿ ಹೊರ ರಾಜ್ಯದವರಿದ್ದಾರೆ ಎಂದರು.
ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಮ್ಮ ಮೆಟ್ರೋದ 22 ಕೀ ಪೋಸ್ಟ್ಗಳಲ್ಲಿ 21 ಬೇರೆ ರಾಜ್ಯದವರಿದ್ದಾರೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಅಧಿಕಾರ ಅವರಿಗಿದೆ. ಅವರು ಅವರವರ ರಾಜ್ಯದವರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಸೂಕ್ತ ನಿಯಮಾವಳಿ ತರಬೇಕು ಎಂದು ಒತ್ತಾಯಿಸಿದರು.