ಬೆಂಗಳೂರು: ರಾಜ್ಯದಲ್ಲಿ 20ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದು, ನಾಳೆ ಬೆಳಗ್ಗೆ 11ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ರಾಜ್ಯಪಾಲರು ಅಧಿಕಾರ ಗೋಪ್ಯತೆಯ ಪ್ರಮಾಣ ಬೋಧಿಸಲಿದ್ದಾರೆ.
20ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ ಶಿಗ್ಗಾಂವಿ ಕ್ಷೇತ್ರದ ಶಾಸಕರೂ ಆಗಿರುವ ಬೊಮ್ಮಾಯಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು. ಈ ಮೂಲಕ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಗೊಂದಲಕ್ಕೆ ತೆರೆ ಬಿದ್ದಿದೆ.
ಅಂದು ಅಪ್ಪ ಇಂದು ಮಗ ಸಿಎಂ..
ಕೇಂದ್ರದ ಮಾಜಿ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷರಾಗಿದ್ದ ದಿ.ಎಸ್.ಆರ್. ಬೊಮ್ಮಾಯಿಯವರ ಪುತ್ರ ಬಸವರಾಜ್ ಬೊಮ್ಮಾಯಿ. ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಮುಖ್ಯಮಂತ್ರಿ ಆಗುತ್ತಿರುವುದು ರಾಜ್ಯದಲ್ಲಿ ಇದು ಎರಡನೇ ಬಾರಿ.
ಈ ಹಿಂದೆ ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರು. ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಸಿಎಂ ಆಗಿರುವುದು ಈ ಎರಡು ಕುಟುಂಬಗಳಲ್ಲಿ ಮಾತ್ರ. ಎಸ್.ಆರ್.ಬೊಮ್ಮಾಯಿ ಅವರು ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದರು. ಅವರ ಪುತ್ರ ಬಸವರಾಜ ಈಗ 20ನೇ ಸಿಎಂ ಆಗಿ ಆಯ್ಕೆಯಾಗಿದ್ದಾರೆ.