ಕರ್ನಾಟಕ

karnataka

ETV Bharat / state

ಪಟಾಕಿ ದುರಂತ: ಪ್ರಕರಣದ ಸೂಕ್ತ ತನಿಖೆ, ಶೀಘ್ರ ಪರಿಹಾರ ಬಿಡುಗಡೆಗೆ ಬೊಮ್ಮಾಯಿ ಒತ್ತಾಯ - ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಅತ್ತಿಬೆಲೆ ಪಟಾಕಿ ದುರಂತ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಹಾಗು ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಬಸವರಾಜ್​ ಬೊಮ್ಮಾಯಿ
ಬಸವರಾಜ್​ ಬೊಮ್ಮಾಯಿ

By ETV Bharat Karnataka Team

Published : Oct 8, 2023, 2:13 PM IST

ಬೆಂಗಳೂರು:ಅತ್ತಿಬೆಲೆಯಲ್ಲಿ ಘೋರ ದುರಂತ ಘಟಿಸಿದೆ. ಕಾನೂನು ಉಲ್ಲಂಘಿಸಿ ಪಟಾಕಿ ಶೇಖರಣೆ ಮಾಡಿಕೊಳ್ಳಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು. ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದರು.

ಆರ್.ಟಿ.ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಘೋಷಣೆ ಮಾಡಿರುವ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕು. ಹಾವೇರಿಯಲ್ಲೂ ಪಟಾಕಿ ದುರಂತ ಆಗಿತ್ತು. ಕಾನೂನಿನಲ್ಲಿ ಪಟಾಕಿಗಳನ್ನು ಇಷ್ಟೊಂದು ಪ್ರಮಾಣದಲ್ಲಿ ಶೇಖರಣೆಗೆ ಅವಕಾಶ ಇಲ್ಲ. ಈ‌ ಒಂದೂವರೆ ತಿಂಗಳಲ್ಲಿ ಎರಡನೇ ಪಟಾಕಿ ದುರಂತ ನಡೆದಿದೆ. ಈ ಮೊದಲು ಹಾವೇರಿಯಲ್ಲಿ ದುರಂತ ನಡೆದು ನಾಲ್ಕು ಜನ ಮೃತಪಟ್ಟಿದ್ದರು. ಈಗ ಅತ್ತಿಬೆಲೆಯಲ್ಲಿ 14 ಜನ ಮೃತಪಟ್ಟಿದ್ದಾರೆ ಅಂದರೆ ನಿಯಮಗಳ ಪಾಲನೆ ಆಗುತ್ತಿಲ್ಲ ಅಂತ ಗೊತ್ತಾಗುತ್ತದೆ. ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಬೇಕು. ಮೊದಲು ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ತಗೊಂಡರೆ ಇಂತಹ ಘಟನೆಗಳು ನಿಲ್ಲುತ್ತವೆ ಎಂದು ಸಲಹೆ ನೀಡಿದರು.

ಅತ್ತಿಬೆಲೆ ಪಟಾಕಿ ದುರಂತಕ್ಕೆ ಸ್ಥಳೀಯ‌ ಜಿಲ್ಲಾಡಳಿತದ ನಿರ್ಲಕ್ಷ್ಯ ಕಾರಣ. ಹಣಕಾಸು ವ್ಯವಹಾರ ಮಾಡಿಕೊಂಡು ಅಕ್ರಮವಾಗಿ ಲೈಸನ್ಸ್ ಕೊಡೋದು, ಅಕ್ರಮ ಶೇಖರಣೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಇಷ್ಟು ದೊಡ್ಡ ದುರಂತ ಆಗಿದೆ. ಪಟಾಕಿ ನಿರ್ವಹಣೆಯ ನಿಯಮಗಳ ಪಾಲನೆ ಆಗುತ್ತಿಲ್ಲ. ಸರ್ಕಾರ ಕಣ್ತೆರೆಯದಿದ್ದರೆ ಇನ್ನಷ್ಟು ಘಟನೆಗಳು ನಡೆಯಲಿವೆ ಎಂದು ಎಚ್ಚರಿಸಿದರು.

ಬಿಜೆಪಿ ನಾಯಕರ ಪ್ರವಾಸ ವಿಳಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮ್ಮ ಅಧ್ಯಕ್ಷರು, ನಾವು ಎಲ್ಲ ಕೂತು ಚರ್ಚೆ ಮಾಡುತ್ತೇವೆ. ಎಲ್ಲರೂ ಚರ್ಚಿಸಿ ಪ್ರವಾಸದ ರೂಪರೇಷೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಎಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ ಎಂದರು.

ರಾಜರಾಜೇಶ್ವರಿ ವಲಯದ 9 ವಾರ್ಡ್​ಗಳಿಗೆ ಅನುದಾನ ಕೊಡದ ಸರಕಾರದ ನಡೆಯನ್ನು ಮಾಜಿ ಸಿಎಂ ಬೊಮ್ಮಾಯಿ ಖಂಡಿಸಿದರು. ನಮ್ಮ ಸರ್ಕಾರ ಇದ್ದಾಗ ನಾವು ಭೇದ-ಭಾವ ಮಾಡಿರಲಿಲ್ಲ. ಸೀನಿಯಾರಿಟಿ ಮೇಲೆ ಅನುದಾನ ಕೊಟ್ಟಿದ್ದೆವು. ಆದರೆ ಈಗ ಸಿನಿಯಾರಿಟಿ ಇಲ್ಲ ಈಗಾಗಲೇ ಪಾಲಿಕೆ ವಾರ್ಡ್​ಗಳಿಗೆ ಅನುದಾನ ಕೊಡದೇ ಎಲ್ಲ ನಿಲ್ಲಿಸಿದ್ದಾರೆ. ಈಗ ಅದರ ಮೇಲೆ ತಾರತಮ್ಯ ಮಾಡುತ್ತಿದಾರೆ. ತಾರತಮ್ಯ ಮಾಡದೇ ಸರ್ಕಾರ ಕೂಡಲೇ ಅನುದಾನ ಕೊಡಲಿ. ಬೇರೆ ವಾರ್ಡ್​ಗಳಿಗೆ ಅನುದಾನ ಕೊಟ್ಟು ರಾಜರಾಜೇಶ್ವರಿ ವಲಯಕ್ಕೆ ಕೊಟ್ಟಿಲ್ಲ ಅಂದರೆ ಅದು ರಾಜಕೀಯವೇ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‌

ಇಸ್ರೇಲ್ ಮೇಲಿನ ದಾಳಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇಸ್ರೇಲ್ ಮೇಲೆ ಹಮಾಸ್ ದಾಳಿ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ, ಮಧ್ಯ ಏಷ್ಯಾ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಭಂಗ ತಂದಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿರೋದು ಅತ್ಯಂತ ಖಂಡನೀಯ. ಈಗ ಇಸ್ರೇಲ್ ಪ್ರತಿದಾಳಿ ಮಾಡುತ್ತಿದೆ. ಮಧ್ಯ ಏಷ್ಯಾದಲ್ಲಿ ಶಾಂತಿ ನೆಲೆಸಬೇಕಿರುವುದು ಬಹಳ ಮುಖ್ಯ. ಇಸ್ರೇಲ್, ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಈ ದಾಳಿ ಆತಂಕ ಹುಟ್ಟಿಸಿದೆ, ತೊಂದರೆ ಆಗಿದೆ. ಈ ದಾಳಿಯನ್ನು ಇಡೀ ವಿಶ್ವವೇ ಗಂಭೀರವಾಗಿ ತೆಗೆದುಕೊಳ್ಳಬೇಕು, ದಾಳಿಗೆ ಕಾರಣ ಆಗಿರುವವರ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಭಾರತದ ನಿಲುವನ್ನು ನಮ್ಮ ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಜತೆ ನಿಲ್ಲೋದಾಗಿ ಪ್ರಧಾನಿ ಘೋಷಿಸಿದ್ದಾರೆ. ಇದು ಒಂದು ಒಳ್ಳೆಯ ನಿರ್ಧಾರ ಎಂದರು.

ಬಿಜೆಪಿ - ಜೆಡಿಎಸ್ ಮೈತ್ರಿಗೆ ವಿರೋದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಒಟ್ಟಿಗೆ ಕೆಲಸ ಮಾಡಬೇಕೆಂದಾಗ ಕೆಲವು ಸ್ಥಳೀಯ ವಿಚಾರ ಮುನ್ನಲೆಗೆ ಬರುತ್ತದೆ. ಈ ಕುರಿತು ನಮ್ಮ ನಾಯಕರು ಮಾತನಾಡುತ್ತಾರೆ. ಯಾವುದೇ ಸೀಟು ಹೊಂದಾಣಿಕೆ ಬಗ್ಗೆ ಇನ್ನೂ ಅಂತಿಮ ಆಗಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನ ಮಾಡುತ್ತೇವೆ ಅಂತ ವರಿಷ್ಠರು ಹೇಳಿದ್ದಾರೆ. ಎಲ್ಲಾ ಹಿರಿಯ ನಾಯಕರು, ಹಾಗೆಯೇ ಯಾರಿಗೆಲ್ಲಾ ತೊಂದರೆಯಾಗಿದೆ, ಯಾವ ಜಿಲ್ಲೆಗಳಲ್ಲಿ ‌ತೊಂದರೆಯಾಗಿದೆ, ಅವರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯಗಳಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಟನೆಲ್​ ರಸ್ತೆಗಳ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಟನೆಲ್ ರಸ್ತೆ ನಿರ್ಮಿಸಲು ನಮ್ಮ ವಿರೋಧ ಇಲ್ಲ. ಆದರೆ ಸರ್ಕಾರ ತರಾತುರಿಯಲ್ಲಿ ಮಾಡುತ್ತಿದೆ. ಈಗಾಗಲೇ ನಗರದ ಸಂಚಾರ ವ್ಯವಸ್ಥೆ ಬಹಳ ಹದಗೆಟ್ಟಿದೆ. ಏಳೆಂಟು ರಸ್ತೆಗಳನ್ನು ಅಗೆದು ಸಂಚಾರ ಸಂಪೂರ್ಣ ನಿಲ್ಲಿಸಿದರೆ ಕಷ್ಟ. ಪರ್ಯಾಯ ಪರಿಹಾರ ಕಂಡುಕೊಂಡು ಕೆಲಸ ಮಾಡಲಿ ವೈಟ್ ಟ್ಯಾಪಿಂಗ್ ಮಾಡೋದಕ್ಕಾಗಿ ವರ್ಷಗಟ್ಟಲೆ ಸಮಯ ಹಿಡಿಯಿತು. ಆಗ ಸಮಸ್ಯೆ ಆಯಿತು. ಈಗ ಟನೆಲ್​ ರಸ್ತೆಗಳ ವಿಚಾರದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡು ಮಾಡಿದರೆ ಉತ್ತಮ ಎಂದು ಸಲಹೆ ನೀಡಿದರು.

ಹೆಚ್‌ಡಿಕೆ ಸಂತಾಪ: ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಸಂಗ್ರಹಗಾರದಲ್ಲಿ ಸಂಭವಿಸಿರುವ ಅಗ್ನಿ ದುರಂತ ಪ್ರಕರಣವನ್ನು ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಸಂಗ್ರಹಗಾರದಲ್ಲಿ ಸಂಭವಿಸಿರುವ ಅಗ್ನಿ ದುರಂತದಲ್ಲಿ 14 ಜನ ಕಾರ್ಮಿಕರು ದುರಂತ ಸಾವು ಕಂಡಿರುವ ಘಟನೆಯ ಬಗ್ಗೆ ತಿಳಿದು ನನಗೆ ತೀವ್ರ ದಿಗ್ಭ್ರಮೆ ಉಂಟಾಗಿದೆ. ದೀಪಾವಳಿಗೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಈ ಮುಗ್ಧ ಜೀವಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬಲಿಯಾಗಿರುವ ಘಟನೆ ನನ್ನ ಮನವನ್ನು ಕಲುಕಿದೆ. ಜೀವ ಕಳೆದುಕೊಂಡ ಎಲ್ಲಾ ನತದೃಷ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕುಟುಂಬಗಳಿಗೆ ಕರುಣಿಸಲಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಹೆಚ್‌ಡಿ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ:ಅತ್ತಿಬೆಲೆ ಪಟಾಕಿ ದುರಂತ: ಮಾಲೀಕನ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ABOUT THE AUTHOR

...view details