ಬೆಂಗಳೂರು :ಬಸವರಾಜ ಬೊಮ್ಮಾಯಿ ಸರ್ಕಾರದ 'ತಿಂಗಳು ಆರು ನಿರ್ಣಯ ನೂರು' ಕಾರ್ಯಕ್ರಮ ವಿಧಾನಸೌಧದಲ್ಲಿ ನೆರವೇರಿತು. ಆದರೆ, ಸಮಾರಂಭದಲ್ಲಿ ಕೆಲ ಸಚಿವರ ಅನುಪಸ್ಥಿತಿ ಅನುಮಾನಗಳಿಗೆ ಕಾರಣವಾಗಿದೆ.
ಬೊಮ್ಮಾಯಿ ಸರ್ಕಾರದ ಆರು ತಿಂಗಳ ಸಾಧನಾ ಸಮಾರಂಭ 'ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ತಿಂಗಳು ಆರು ನಿರ್ಣಯ ನೂರು' ಎಂಬ ಕಾರ್ಯಕ್ರಮದ ಮೂಲಕ ಬೊಮ್ಮಾಯಿ ಸರ್ಕಾರ ಆರು ತಿಂಗಳ ಆಡಳಿತದ ಸಾಧನೆಯ ಹಾದಿಯನ್ನು ಪ್ರದರ್ಶಿಸಿತು. ಈ ನಿಟ್ಟಿನಲ್ಲಿ ರಾಜ್ಯದ ಅಭಿವೃದ್ಧಿಯ ಚಿತ್ರಣ ನೀಡುವ ಕಿರುಹೊತ್ತಿಗೆಯನ್ನು ಸಿಎಂ ಬಳಗ ಬಿಡುಗಡೆ ಮಾಡಿತು. ಕಳೆದ 6 ತಿಂಗಳಲ್ಲಿ ಕೋವಿಡ್ ಮತ್ತು ಪ್ರವಾಹ ನಿರ್ವಹಣೆ, ರೈತರಿಗೆ, ಮಹಿಳೆಯರಿಗೆ ತೆಗೆದುಕೊಂಡಿರುವ ತೀರ್ಮಾನಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ.
ಬೊಮ್ಮಾಯಿ ಸರ್ಕಾರದ ಆರು ತಿಂಗಳ ಸಾಧನಾ ಸಮಾರಂಭ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಸರ್ಕಾರದ ಸಚಿವರು, ಅಧಿಕಾರಿಗಳು ಭಾಗಿಯಾಗಿದ್ದರು. ಆದರೆ, ಕಾರ್ಯಕ್ರಮದಲ್ಲಿ ಕೆಲ ಸಚಿವರ ಅನುಪಸ್ಥಿತಿ ಹಲವು ಅನುಮಾನಕ್ಕೆ ಕಾರಣವಾಗಿದೆ. ವೇದಿಕೆಯಲ್ಲಿ ಸಚಿವರಾದ ಆರ್. ಅಶೋಕ್, ಎಂಟಿಬಿ ನಾಗರಾಜ್, ಬಿ. ಸಿ ನಾಗೇಶ್, ಎಸ್. ಅಂಗಾರ, ಬಿ.ಸಿ ಪಾಟೀಲ್, ಎಸ್. ಟಿ ಸೋಮಶೇಖರ್, ಕೆ. ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ವಿ. ಸೋಮಣ್ಣ, ಆರಗ ಜ್ಞಾನೇಂದ್ರ, ಡಾ.ಕೆ ಸುಧಾಕರ್, ಗೋಪಾಲಯ್ಯ, ಶಂಕರ ಮುನೇನಕೊಪ್ಪ, ಬೈರತಿ ಬಸವರಾಜ್, ನಾರಾಯಣ ಗೌಡ, ಪ್ರಭು ಚೌವ್ಹಾಣ್, ಮುರುಗೇಶ್ ನಿರಾಣಿ, ಆನಂದ್ ಸಿಂಗ್, ಮುನಿರತ್ನ ಉಪಸ್ಥಿತರಿದ್ದರು.
'ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ತಿಂಗಳು ಆರು ನಿರ್ಣಯ ನೂರು' ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು. ಆದರೆ, ಸಚಿವರಾದ ಅಶ್ವತ್ಥ್ ನಾರಾಯಣ್, ಶ್ರೀರಾಮುಲು, ಸುನಿಲ್ ಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಸಿ ಸಿ ಪಾಟೀಲ್, ಹಾಲಪ್ಪ ಆಚಾರ್, ಜೆ.ಸಿ ಮಾಧುಸ್ವಾಮಿ ಅನುಪಸ್ಥಿತವಾಗಿದ್ದು ಹಲವರ ಅನುಮಾನಕ್ಕೆ ಕಾರಣವಾಗಿದೆ.
ಓದಿ:ಹೊಸ ವೈರಸ್ ಸುಳಿವು ಕೊಟ್ಟ ವಿಜ್ಞಾನಿಗಳು: 'ನಿಯೋಕೋವ್' ಸೋಂಕಿತ ಮೂವರಲ್ಲಿ ಒಬ್ಬನ ಸಾವು ಖಚಿತವಂತೆ!