ಬೆಂಗಳೂರು: 2022-23ರ ಬಜೆಟ್ ವರ್ಷ ಮುಕ್ತಾಯದ ಹೊಸ್ತಿಲಲ್ಲಿ ಇದ್ದು, ಸಿ ಎಂ ಬೊಮ್ಮಾಯಿ 2023-24 ಸಾಲಿನ ಆಯವ್ಯಯ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಹಣ ಹೊಂದಾಣಿಕೆಗೆ ಬಹುತೇಕ ಆರ್ ಬಿಐ ಮೂಲಕ ಸರ್ಕಾರ ಸಾಲ ಎತ್ತುವಳಿ ಮಾಡುತ್ತದೆ. ಆದರೆ ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸರ್ಕಾರ ಸಾಲ ಮಾಡುವ ಪ್ರಕ್ರಿಯೆಗೆ ಕೊಂಚ ಬ್ರೇಕ್ ಹಾಕಿದೆ.
2022-23 ಸಾಲಿನ ಬಜೆಟ್ ವರ್ಷ ಮುಕ್ತಾಯ ಹಂತದಲ್ಲಿದೆ. ಕೊರತೆಯ ಬಜೆಟ್ ಮಂಡಿಸಿದ್ದ ಸಿಎಂ ಬೊಮ್ಮಾಯಿ ಅವರು ಪ್ರಸಕ್ತ ಬಜೆಟ್ ವರ್ಷದಲ್ಲಿ ಬಂಡವಾಳ ವೆಚ್ಚಕ್ಕಾಗಿ ಸಾಲವನ್ನೇ ನೆಚ್ಚಿಕೊಂಡಿದೆ. ಅದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಬೊಮ್ಮಾಯಿ ಸರ್ಕಾರ ಒಟ್ಟು ಅಂದಾಜು ಸುಮಾರು 72,089 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದೆ. ಆರಂಭಿಕ ಎರಡು ತ್ರೈಮಾಸಿಕದಲ್ಲಿ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡದ ಸರ್ಕಾರ ಮೂರನೇ ತ್ರೈಮಾಸಿಕದಲ್ಲಿ ಸಾಲ ಮಾಡಲು ಆರಂಭಿಸಿತ್ತು.
ಕೋವಿಡ್ ಬಳಿಕ ಆರ್ಥಿಕ ಚೇತರಿಕೆ ಫಲವಾಗಿ, ಈ ವರ್ಷ ತೆರಿಗೆ ಸಂಗ್ರಹ ಗುರಿಮೀರಿ ಸಾಧಿಸುತ್ತಿದೆ. ಆರ್ ಬಿಐ ಮೂಲಕ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಅಭಿವೃದ್ಧಿ ಸಾಲದ ರೂಪದಲ್ಲಿ ಬಹುತೇಕ ಸಾಲ ಎತ್ತುವಳಿ ಮಾಡುತ್ತದೆ.
ನ.15ರಂದು ರಾಜ್ಯ ಸರ್ಕಾರ ಮೊದಲ ಸಾಲ ಎತ್ತುವಳಿ ಮಾಡಲು ಪ್ರಾರಂಭಿಸಿತ್ತು. ಮೂರನೇ ತ್ರೈ ಮಾಸಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲದ ಮೊರೆ ಹೋಗಿದ್ದ ಬೊಮ್ಮಾಯಿ ಸರ್ಕಾರ ಪ್ರಸಕ್ತ ಚಾಲ್ತಿಯಲ್ಲಿರುವ ಅಂತಿಮ ತ್ರೈಮಾಸಿಕದಲ್ಲಿ ಆರ್ ಬಿಐ ಮೂಲಕ ಮಾಡುವ ಸಾಲದ ಪ್ರಕ್ರಿಯೆಗೆ ಕೊಂಚ ಬ್ರೇಕ್ ಹಾಕಿದೆ.
ಈವರೆಗೆ ಆರ್ ಬಿಐ ಮೂಲಕ ಸಾಲ 36,000 ಕೋಟಿ:ರಾಜ್ಯ ಸರ್ಕಾರ ನ.15ರಿಂದ ಮಾರುಕಟ್ಟೆ ಸಾಲವನ್ನು ಎತ್ತುವಳಿ ಮಾಡಲು ಆರಂಭಿಸಿದೆ. ನವೆಂಬರ್ ತಿಂಗಳಲ್ಲಿ 16,000 ಕೋಟಿ ರೂ. ಸಾಲ ಎತ್ತುವಳಿ ಮಾಡಿತ್ತು. ಡಿಸೆಂಬರ್ ತಿಂಗಳಲ್ಲೂ ಒಟ್ಟು 16,000 ಕೋಟಿ ರೂ. ಸಾಲ ಮಾಡಿದೆ. ಈ ವರೆಗೆ ಆರ್ ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಒಟ್ಟು 36,000 ಕೋಟಿ ರೂ. ಸಾಲ ಎತ್ತುವಳಿ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ಮಾಹಿತಿ ನೀಡಿದೆ.
ಆರ್ಥಿಕ ಇಲಾಖೆ ನೀಡಿರುವ ಮಾಹಿತಿಯಂತೆ ಡಿಸೆಂಬರ್ ವರೆಗೆ ಸಾರ್ವಜನಿಕ ಸಾಲದ ಮೂಲಕ ಒಟ್ಟು ಸುಮಾರು 37,601 ಕೋಟಿ ರೂ. ಸಾಲ ಮಾಡಿರುವುದಾಗಿ ತಿಳಿಸಿದೆ. ಕಳೆದ ಬಾರಿ ಡಿಸೆಂಬರ್ ಅಂತ್ಯಕ್ಕೆ ಸಾರ್ವಜನಿಕ ಸಾಲವಾಗಿ 41,983 ಕೋಟಿ ರೂ. ಸಾಲ ಮಾಡಿತ್ತು.