ಬೆಂಗಳೂರು: ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಬಾರಿ ಮುಜುಗರಕ್ಕೆ ಈಡಾಗುವ ಅಕ್ರಮಗಳು ನಡೆದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ವರ್ಷದ ಅಧಿಕಾರಾವಧಿಯಲ್ಲಿ ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸದಿದ್ದರೂ ರತ್ನಗಂಬಳಿ ಹಾಸಿದಷ್ಟು ಸುಗಮವಾಗಿಯಂತೂ ಸಾಗಿಲ್ಲ. ಪಿಎಸ್ಐ ನೇಮಕ ಅಕ್ರಮ, ಶೇ.40ರಷ್ಟು ಲಂಚ ಆರೋಪ, ಗುತ್ತಿಗೆದಾರರಿಂದ ಪ್ರಧಾನಿಗೆ ಪತ್ರ, ಎಸಿಬಿ ದಾಳಿಗಳು, ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಪ್ರಕರಣಗಳು ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿವೆ.
ಶೇ 40ರಷ್ಟು ಕಮೀಷನ್ ಆರೋಪ ಹಿನ್ನೆಲೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದು, ಸರ್ಕಾರಕ್ಕೆ ಒಂದು ದೊಡ್ಡ ಕಪ್ಪುಚುಕ್ಕೆ. ಪಿಎಸ್ಐ ನೇಮಕ ಅಕ್ರಮದಲ್ಲಿ ಸರ್ಕಾರದ ವಿರುದ್ಧ ಕೇಳಿಬಂದ ಆರೋಪ, ಇದೀಗ ಉನ್ನತ ಅಧಿಕಾರಿಗಳ ಬಂಧನ, ವಿಚಾರಣೆ ಜೊತೆ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಇಮೇಜ್ ಕುಗ್ಗಿರುವುದು, ಪ್ರತಿಪಕ್ಷಗಳ ತೀವ್ರ ಆರೋಪ ಹಾಗೂ ಆಕ್ಷೇಪಣೆಗಳು ಸರ್ಕಾರಕ್ಕೆ ಸಾಕಷ್ಟು ಇರಿಸು ಮುರುಸು ತಂದಿವೆ.
ಶೇ 40ರಷ್ಟು ಕಮೀಷನ್ ಆರೋಪ:ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2021ರ ಜು.6ಕ್ಕೆ ಪತ್ರ ಬರೆದಿದ್ದರು. ರಾಜ್ಯದಲ್ಲಿ ಕಾಮಗಾರಿಗಳಿಗೆ ಶೇ.40ರಷ್ಟು ಕಮೀಷನ್ ಕೇಳಲಾಗುತ್ತಿದೆ. ಸರ್ಕಾರದ ಈ ಬೇಡಿಕೆಯಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದರು.
ಆದರೆ ವರ್ಷವಾದರೂ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಪ್ರತಿಪಕ್ಷಗಳು ಸಾಕಷ್ಟು ಆರೋಪ ಸಹ ಮಾಡಿದ್ದವು. ಇದೀಗ ಕೆಂಪಣ್ಣಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದ್ದು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ದಾಖಲೆ ಸಮೇತ ಒದಗಿಸುವಂತೆ ಸೂಚಿಸಲಾಗಿದೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ: ಕೆ.ಎಸ್. ಈಶ್ವರಪ್ಪ ತಮ್ಮ ಬಳಿ ಶೇ.40ರಷ್ಟು ಕಮೀಷನ್ ಕೇಳಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಭಾಗದ ಗುತ್ತಿಗೆದಾರ ಸಂತೋಷ್ ಉಡುಪಿಯಲ್ಲಿ 2022ರ ಏ.12ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೆ ಮುನ್ನ ಡೆತ್ನೋಟ್ ಬರೆದಿಟ್ಟು, ಈಶ್ವರಪ್ಪ ಅವರೇ ತಮ್ಮ ಸಾವಿಗೆ ಕಾರಣ ಎಂದಿದ್ದರು. ಇದನ್ನು ಇಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಹೋರಾಟ ನಡೆಸಿತ್ತು. ಅಂತಿಮವಾಗಿ ಪ್ರತಿಪಕ್ಷದ ಒತ್ತಡ, ಪಕ್ಷದ ರಾಷ್ಟ್ರೀಯ ನಾಯಕರ ಸೂಚನೆ ಹಾಗೂ ರಾಜ್ಯ ನಾಯಕರ ಸಲಹೆ ಮೇರೆಗೆ ಈಶ್ವರಪ್ಪ ಏ.14ರಂದು ರಾಜೀನಾಮೆ ನೀಡಿದರು. ಈ ಘಟನೆ ಸರ್ಕಾರಕ್ಕೆ ಸಾಕಷ್ಟು ಮುಜುಗರ ತರಿಸಿದೆ.
ಪಿಎಸ್ಐ ನೇಮಕ ಅಕ್ರಮ:ರಾಜ್ಯ ಸರ್ಕಾರದ ಪಾಲಿಗೆ ಅತ್ಯಂತ ದೊಡ್ಡ ಮುಜುಗರ ತರಿಸಿದ ಘಟನೆ ಪಿಎಸ್ಐ ನೇಮಕದಲ್ಲಿ ನಡೆದ ಅಕ್ರಮ. ಈ ಅಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು. ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪಾಲ್, ಡಿವೈಎಸ್ಪಿ ಶಾಂತಕುಮಾರ್, ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ್ ಮೇತ್ರೆ ಸೇರಿದಂತೆ ಹಲವರ ಬಂಧನವಾಗಿದೆ.