ಬೆಂಗಳೂರು:ಸಾಕಷ್ಟು ಸವಾಲು, ಸಂಕಷ್ಟಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಜು. 28ಕ್ಕೆ ಮೊದಲ ವರ್ಷ ಪೂರ್ಣಗೊಳಿಸಲಿದೆ. ಮುಖ್ಯಮಂತ್ರಿಯಾಗಿ ಏಕಾಂಗಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ ಮೊದಲ ಸಂಪುಟ ಸಭೆ ನಡೆಸಿ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡುವ ವಿದ್ಯಾನಿಧಿ ಘೋಷಿಸಿದರು. ಆರಂಭದಲ್ಲೇ ಅನ್ನದಾತರ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಘೋಷಣೆಯೊಂದಿಗೆ ರೈತರ ಮನಗೆಲ್ಲುವ ಪ್ರಯತ್ನ ನಡೆಸಿದರು.
ಜತೆಗೆ ವಿವಿಧ ಸಾಮಾಜಿಕ ಪಿಂಚಣಿ ಮೊತ್ತವನ್ನು ಏರಿಕೆ ಮಾಡುವ ಮೂಲಕ ತಮ್ಮ ಆದ್ಯತೆಯನ್ನು ಪ್ರದರ್ಶಿಸಿದರು. ಕೋವಿಡ್ ಆತಂಕದ ನಡುವೆಯೂ ಕಳೆದ ಮೂರು ವರ್ಷಗಳಿಂದ ನಡೆಯದಿದ್ದ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸಿ, ಮಾರ್ಚ್ನಲ್ಲಿ ಚೊಚ್ಚಲ ಬಜೆಟ್ ಮಂಡಿಸುವ ಮೂಲಕ ಜನತೆಗೆ ಹಲವು ಯೋಜನೆ, ಘೋಷಣೆ ಮಾಡಿದ್ದಾರೆ. ಕಾಶಿ ಯೋಜನೆಗೆ ಸಬ್ಸಿಡಿ ನೀಡುವ ಯೋಜನೆ ಘೋಷಿಸಿದ್ದಾರೆ.
ಸಾಧನೆ-ಯೋಜನೆ:
- 'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆ ಜಾರಿ ಮಾಡಿದ್ದು, 1,000 ಕೋಟಿ ರೂ. ಹಣವನ್ನು ಮೀಸಲಿರಿಸಿ 19 ಲಕ್ಷ ರೈತ ಮಕ್ಕಳಿಗೆ ಲಾಭವಾಗುವ ಯೋಜನೆ ಪ್ರಕಟ.
- ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಬೊಮ್ಮಾಯಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಪ್ಪಿಕೊಂಡು ಜಾರಿಗೆ ತಂದಿದೆ.
- ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ 1,200 ರೂ.ಗಳಿಗೆ ಹೆಚ್ಚಳ, ವಿಧವಾ ವೇತನ 800 ರೂ. ಗಳಿಗೆ ಏರಿಕೆ, ದಿವ್ಯಾಂಗಿಗಳ ಮಾಸಿಕ ವೇತನ 800 ರೂ. ಗಳಿಗೆ ಹೆಚ್ಚಳ ಮಾಡಿ ಆದೇಶ.
- ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಮೃತ ಯೋಜನೆಗಳ ಘೋಷಣೆ, ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು.
- ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಆಯ್ದ 750 ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಮತ್ತು ಆಶ್ರಯರಹಿತರನ್ನು ಗುರುತಿಸಿ ಸರ್ವರಿಗೂ ವಸತಿ ಕಲ್ಪಿಸುವ ಗುರಿ.
- ಅಮೃತ ರೈತ ಉತ್ಪಾದಕ ಸಂಸ್ಥೆಗಳು ಯೋಜನೆಯಡಿ ರೈತ, ನೇಕಾರ ಮತ್ತು ಮೀನುಗಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ವಿಶೇಷ ಪ್ರೋತ್ಸಾಹ ನೀಡಲು, 750 ಅಮೃತ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ. ಪ್ರತಿ ಸಂಸ್ಥೆಗೆ 30 ಲಕ್ಷ ರೂ. ನಂತೆ ಮೂರು ವರ್ಷದ ಅವಧಿಗೆ 225 ಕೋಟಿ ರೂ. ಅನುದಾನ.
- ಅಮೃತ ನಿರ್ಮಲ ನಗರ ಯೋಜನೆಯಡಿ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡಿಕೊಳ್ಳಲು ಅಮೃತ ನಿರ್ಮಲ ನಗರ ರೂಪಿಸಿ ಪ್ರತಿ ಸ್ಥಳೀಯ ಸಂಸ್ಥೆಗೆ 1 ಕೋಟಿ ರೂ.ನಂತೆ 75 ಕೋಟಿ ರೂ. ನೆರವು.
- ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ಆಯ್ದ 750 ಶಾಲೆಗಳಿಗೆ ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ ಇತ್ಯಾದಿ ಸಮಗ್ರ ಸೌಲಭ್ಯ ಒದಗಿಸಲು ತಲಾ 10 ಲಕ್ಷ ರೂ.ಗಳಂತೆ 75 ಕೋಟಿ ರೂ. ಅನುದಾನ.
- ಅಮೃತ ಅಂಗನವಾಡಿ ಕೇಂದ್ರಗಳು ಯೋಜನೆಯಡಿ ಆಯ್ದ 750 ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಪ್ರತಿ ಅಂಗನವಾಡಿಗೆ 1 ಲಕ್ಷ ರೂ.ನಂತೆ 7.5 ಕೋಟಿ ರೂ. ನೆರವು.
- ಅಮೃತ ನಗರೋತ್ಥಾನ ಯೋಜನೆಯಡಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಅಮೃತ ನಗರೋತ್ಥಾನ ಯೋಜನೆ ಪ್ರಾರಂಭ; ಅಮೃತ ಮಹೋತ್ಸವದ ನಿಮಿತ್ತ ಬೆಂಗಳೂರಿನ 75 ಕೊಳೆಗೇರಿ ಅಭಿವೃದ್ಧಿ; 75 ಕೆರೆ/ ಉದ್ಯಾನಗಳ ಅಭಿವೃದ್ಧಿ. ನಗರದ ಸುಗಮ ಸಂಚಾರಕ್ಕೆ 12 ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿ, ಫ್ಲೈ ಓವರ್, ರಿಂಗ್ ರಸ್ತೆ ಅಭಿವೃದ್ಧಿಗೆ ಕ್ರಮ.
- ಅಮೃತ ಸ್ವಸಹಾಯ ಕಿರು ಉದ್ದಿಮೆಗಳು ಯೋಜನೆಯಡಿ ಆಯ್ದ 7,500 ಸ್ವಸಹಾಯ ಗುಂಪುಗಳನ್ನು ಕಿರು ಉದ್ಯಮ ಸಂಸ್ಥೆಗಳಾಗಿ ರೂಪಿಸಲು ತಲಾ 1 ಲಕ್ಷ ರಂತೆ 75 ಕೋಟಿ ರೂ. ಬೀಜ ಧನ ಸೌಲಭ್ಯ.
- ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯಡಿ, ಆಯ್ದ 750 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಗುರುತಿಸಿ ರಚನಾತ್ಮಕ ಸಾಮುದಾಯಿಕ ಸೇವೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಣೆ.
- ಅಮೃತ ಆರೋಗ್ಯ ಮೂಲಸೌಕರ್ಯ ಉನ್ನತೀಕರಣ ಯೋಜನೆಯಡಿ ಆಯ್ದ 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯಗಳ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ತಲಾ 20 ಲಕ್ಷ ರೂ.ಗಳಂತೆ 150 ಕೋಟಿ ರೂ. ವೆಚ್ಚ.
- ಅಮೃತ ಕೌಶಲ್ಯ ತರಬೇತಿ ಯೋಜನೆಯಡಿ ರಾಜ್ಯದ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳ 75 ಸಾವಿರ ಯುವಕ ಯುವತಿಯರ ಕೌಶಲ್ಯಾಭಿವೃದ್ಧಿಗೆ 2 ವರ್ಷಗಳ ತರಬೇತಿ ಯೋಜನೆಗೆ 112 ಕೋಟಿ ರೂ. ವೆಚ್ಚ.
- ಸ್ಟಾರ್ಟಪ್ ಉತ್ತೇಜನ ಯೋಜನೆಯಡಿ 75 ಸ್ಟಾರ್ಟಪ್ ಉದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ.
- ಮುಂದಿನ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಹಾಗೂ ಪದಕ ವಿಜೇತ ಸಾಮರ್ಥ್ಯವುಳ್ಳ ಆಯ್ದ 75 ಕ್ರೀಡಾಪಟುಗಳನ್ನು ರೂಪಿಸಲು ಅಗತ್ಯವಾದ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಅಮೃತ ಕ್ರೀಡಾ ದತ್ತು ಯೋಜನೆ ಅನುಷ್ಠಾನ.
- ಸರ್ಕಾರದ ವತಿಯಿಂದ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಘೋಷಣೆ.
- ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್ ಲೈನ್ ಜೂಜು ಮತ್ತು ಬೆಟ್ಟಿಂಗ್ ಗಳನ್ನು ಶಿಕ್ಷಾರ್ಹ ಅಪರಾಧ ಎಂದು ಘೋಷಣೆ.
- ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ.ಗಳ ಅನುದಾನ.
- ಮುಂಬೈ ಕರ್ನಾಟಕ ಪ್ರದೇಶವನ್ನು 'ಕಿತ್ತೂರು ಕರ್ನಾಟಕ' ಎಂದು ಮರು ನಾಮಕರಣ ಮಾಡಿ ಘೋಷಣೆ.
- ರಾಜ್ಯದ 31ನೇ ಹೊಸ ಜಿಲ್ಲೆಯಾಗಿ ವಿಜಯಪುರ ಘೋಷಣೆ.
- ಗ್ರಾಮ ಪಂಚಾಯಿತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ ಗ್ರಾಮ ಸೇವಾ ಯೋಜನೆ'ಗೆ ಚಾಲನೆ.
- ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ 20 ಗ್ರಾಮಗಳ ಸ್ಥಳಾಂತರ ಮಾಡಲು ಎರಡು ಸಾವಿರ ಕೋಟಿ ಅನುದಾನ.
ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ವಿಶ್ವೇಶ್ವರಯ್ಯ ನಾಲೆಯ ಸಂಪೂರ್ಣ ಆಧುನೀಕರಣಕ್ಕೆ 500 ಕೋಟಿ ರೂ. ಅನುದಾನ ಬಿಡುಗಡೆ. 1,600 ಕಿಲೋಮೀಟರ್ ಉದ್ದದ ಆಧುನೀಕರಣ ಪ್ರಸ್ತಾವನೆಗೆ ಅನುಮೋದನೆ. ಎತ್ತಿನಹೊಳೆ ಯೋಜನೆಯ ತ್ವರಿತ ಅನುದಾನಕ್ಕೆ ತೀರ್ಮಾನ. - ಮುಖ್ಯಮಂತ್ರಿಗಳ ಡ್ಯಾಶ್ ಬೋರ್ಡ್ ಆರಂಭ.
- ನಾಗರಿಕರ ಸಮಯದ ಉಳಿತಾಯಕ್ಕೆ ಅನುಕೂಲವಾಗುವಂತೆ ಮತ್ತು ವಿಶೇಷವಾಗಿ ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗೆ ನೆರವಾಗಲು ಸರ್ಕಾರದ 56 ನಾಗರಿಕ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಒದಗಿಸಲು ಜನಸೇವಕ ಯೋಜನೆ ಜಾರಿ.
- 2240 ಕೋಟಿ ಪೂರಕ ಅನುದಾನ ಒದಗಿಸಿ ಕೊರೊನಾ ಮೂರನೇ ಅಲೆ ನಿಯಂತ್ರಣ.
- ಕಾರ್ಮಿಕರ ಕಲ್ಯಾಣಕ್ಕಾಗಿ 237 ಕೋಟಿ ಮೊತ್ತದ ನೆರವು.ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ 6 ಸಾವಿರ ಕೋಟಿ ಅನುದಾನ. ಪರಿಶಿಷ್ಟ ಜಾತಿ/ವರ್ಗಕ್ಕೆ ಪ್ರತ್ಯೇಕ ಸಚಿವಾಲಯ ರಚನೆ.
2.66 ಲಕ್ಷ ಕೋಟಿ ಗಾತ್ರದ ಬಜೆಟ್:ಯಡಿಯೂರಪ್ಪ ನಂತರ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋವಿಡ್ ಸಂಕಷ್ಟದ ನಡುವೆಯೂ ಮಾರ್ಚ್ ನಲ್ಲಿ 2.66 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡನೆ ಮಾಡಿದ್ದಾರೆ. ತಮ್ಮ ಚೊಚ್ಚಲ ಬಜೆಟ್ನಲ್ಲಿ ಹಳೆಯ ಯೋಜನೆಗಳ ಮುಂದುವರಿಕೆ, ಹೊಸ ಯೋಜನೆಗಳ ಮಂಜೂರಾತಿ ಸೇರಿದಂತೆ ವಲಯವಾರು ಅನುದಾನ ಹಂಚಿಕೆ ಮಾಡುವ ಮೂಲಕ ಬಿಎಸ್ವೈ ಸಂಪ್ರದಾಯ ಮುಂದುವರೆಸಿಕೊಂಡು ಹೋಗಿದ್ದಾರೆ.