ಬೆಂಗಳೂರು :ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ವಿಸರ್ಜನೆಯಾಗಿದ್ದು, ಸಚಿವರು, ಸಿಎಂ ಕಚೇರಿಗಳಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿ, ನೌಕರರನ್ನು ಕಾರ್ಯಮುಕ್ತಗೊಳಿಸಿ ಆದೇಶಿಸಲಾಗಿದೆ. ಈ ಸಂಬಂಧ ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ. ಚುನಾವಣೆಯಲ್ಲಿ ಬಿಜೆಪಿ ಸೋಲುನುಭವಿಸಿದ ಹಿನ್ನೆಲೆ ಸಿಎಂ ಬೊಮ್ಮಾಯಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ಅವರ ನೇತೃತ್ವದ ಸಚಿವ ಸಂಪುಟವನ್ನು ಸಹ ವಿಸರ್ಜಿಸಲಾಗಿದೆ.
ಮುಖ್ಯಮಂತ್ರಿ, ಸಂಪುಟ ದರ್ಜೆ ಸಚಿವರು, ರಾಜ್ಯ ಸಚಿವರ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆ ಸಚಿವರ ಆಪ್ತ ಶಾಖೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯವರ ಆಪ್ತ ಶಾಖೆ, ಮುಖ್ಯಮಂತ್ರಿಯವರ ಸಲಹೆಗಾರರ ಆಪ್ತ ಶಾಖೆ, ಸಂಪುಟ ಸಚಿವರ ಸ್ಥಾನಮಾನ ಹೊಂದಿರುವ ಪ್ರಾಧಿಕಾರಿಗಳ ಆಪ್ತ ಶಾಖೆಗಳಲ್ಲಿ, ಸ್ಥಳ ನಿಯುಕ್ತಿ ನಿಯೋಜನೆಯಾಗಿರುವ, ಒಪ್ಪಂದ ಹಾಗು ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ನೌಕರರನ್ನು ಕಾರ್ಯಮುಕ್ತಗೊಳಿಸಲು ಆದೇಶಿಸಲಾಗಿದೆ.
ಈ ಹಿನ್ನೆಲೆ ಕಚೇರಿಗಳಲ್ಲಿ ಪ್ರಸ್ತುತ ಬಾಕಿಯಿರುವ ಎಲ್ಲಾ ಭೌತಿಕ ಕಡತಗಳು ಮತ್ತು ಇ-ಆಫೀಸ್ ಕಡತಗಳನ್ನು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರಿಗೆ ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಕಚೇರಿ, ಉಪಯೋಗಕ್ಕಾಗಿ ಒದಗಿಸಿರುವ ಲೇಖನಿ, ಸಾಮಾಗ್ರಿಗಳು, ಗಣಕಯಂತ್ರಗಳು, ಪೀಠೋಪಕರಣಗಳು ಹಾಗೂ ಇತ್ಯಾದಿ ಸಾಮಾಗ್ರಿಗಳನ್ನು ಕೂಡಲೇ ಸಂಬಂಧಪಟ್ಟವರಿಗೆ ಹಿಂದಿರುಗಿಸುವಂತೆ ಸೂಚಿಸಲಾಗಿದೆ.