ನವದೆಹಲಿ/ಬೆಂಗಳೂರು: ಕರಡಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವಂತೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ ಸಿಎಂ, ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಗುಡೆಕೋಟೆ ಸ್ಲಾತ್ ಕರಡಿಧಾಮ ಹಾಗೂ ಭೀಮಾಗಡ್ ಅಭಯಾರಣ್ಯಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವಂತೆ ಹೇಳಿದರು.
ಇದನ್ನೂ ಓದಿ:ರಾಜ್ಯದಲ್ಲಿ ಜವಳಿ ಪಾರ್ಕ್ ಸ್ಥಾಪನೆಗೆ ಅನುದಾನ ಒದಗಿಸುವಂತೆ ಕೇಂದ್ರಕ್ಕೆ ಸಿಎಂ ಮನವಿ
ಈ ನಿಟ್ಟಿನಲ್ಲಿ ಈಗಾಗಲೇ ಕರಡು ಅಧಿಸೂಚನೆಯನ್ನು ರಾಜ್ಯ ಸಚಿವ ಸಂಪುಟ ಸಭೆ ಅನುಮೋದಿಸಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಶಿಫಾರಸು ಮಾಡಿ ಸಲ್ಲಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಕಡತ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.