ಬೆಂಗಳೂರು:ಸಿಟಿ ಸಿವಿಲ್ ಕೋರ್ಟ್ ಜಡ್ಜ್ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಹಲಸೂರು ಗೇಟ್ ಠಾಣೆ ಇನ್ಸ್ಪೆಕ್ಟರ್ ತಲೆದಂಡವಾಗಿದೆ.
ಕೇಂದ್ರ ವಿಭಾಗದ ಡಿಸಿಪಿ, ಹಲಸೂರು ಗೇಟ್ ಠಾಣೆಯ ಇನ್ಸ್ಪೆಕ್ಟರ್ ಎನ್.ಹೆಚ್.ರಾಜಶೇಖರ್ ಅವರನ್ನು ಕರ್ತವ್ಯ ಲೋಪ ಹಿನ್ನೆಲೆ ಅಮಾನತು ಮಾಡಿದ್ದಾರೆ. ಪ್ರಕರಣದಲ್ಲಿ ಜಡ್ಜ್ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಗಿತ್ತು. ಅದರಂತೆ ಕೇಸ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಕೇಸ್ನ ಚಾರ್ಜ್ಶೀಟ್ ಸಲ್ಲಿಸಲು 90 ದಿನಗಳ ಕಾಲಾವಕಾಶವಿತ್ತು. 2020ರ ಅಕ್ಟೋಬರ್ 19ರಂದು ಪ್ರಕರಣ ನಡೆದಿದ್ದು, ಜನವರಿ 19ರೊಳಗೆ ಚಾರ್ಜ್ಶೀಟ್ ಸಲ್ಲಿಸಬೇಕಿತ್ತು. ಆದರೆ, ಚಾರ್ಜ್ಶೀಟ್ ಸಲ್ಲಿಕೆ ಮಾಡುವಲ್ಲಿ ತಡ ಮಾಡಿದ್ದಕ್ಕೆ ಇನ್ಸ್ಪೆಕ್ಟರ್ ಎನ್.ಹೆಚ್.ರಾಜಶೇಖರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಈ ಬಗ್ಗೆ ಉತ್ತರ ನೀಡುವಂತೆ ಡಿಸಿಪಿಯವರು ಎನ್.ಹೆಚ್.ರಾಜಶೇಖರ್ಗೆ ನೋಟಿಸ್ ನೀಡಿದ್ದರು. ಆದರೆ, ರಾಜಶೇಖರ್ ಅದಕ್ಕೂ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲ. ಹೀಗಾಗಿ, ಇದೀಗ ಅಮಾನತು ಮಾಡಲಾಗಿದೆ.
ಪ್ರಕರಣದ ಹಿನ್ನಲೆ ಏನು?
2020ರ ಅಕ್ಟೋಬರ್ 19ನೇ ತಾರೀಖಿನಂದು 33ನೇ ಸಿಸಿಹೆಚ್ ಜಡ್ಜ್ ಸೀನಪ್ಪರಿಗೆ ಒಂದು ಪತ್ರ ಬಂದಿತ್ತು. ಆದನ್ನು ಸಂಜೆ 5 ಗಂಟೆಗೆ ತೆಗೆದು ನೋಡಿದ್ದ ನ್ಯಾಯಾಧೀಶರಾದ ಜಿ.ಎಂ.ಸೀನಪ್ಪರಿಗೆ ಆ ಪತ್ರದ ಒಳಗೆ ಬಂಡೆ ಬ್ಲಾಸ್ಟ್ ಮಾಡುವ ಡಿಡೋನೆಟರ್ ವೈರ್ ಇಟ್ಟಿದ್ದು ಕಂಡುಬಂದಿತ್ತು.
ಜಡ್ಜ್ ಸೀನಪ್ಪ ಅವರು ತಕ್ಷಣ ಸಿಸಿಬಿ ಕಮಿಷನರ್ಗೆ ಮಾಹಿತಿ ರವಾನೆ ಮಾಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು, ಅದನ್ನು ವಶಕ್ಕೆ ಪಡೆದು ಪರಿಶೀಲನೆ ಮಾಡಿದ್ದರು. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಆ ದಿನ ಸಂಜೆ 5 ಗಂಟೆಯಿಂದ ರಾತ್ರಿ 12ಗಂಟೆವರೆಗೂ 7 ಗಂಟೆಗಳ ಕಾಲ ಶೋಧಕಾರ್ಯ ನಡೆದಿತ್ತು.