ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹುಸಿ ಬಾಂಬ್ ಕರೆ ಬಂದಿದ್ದು, ಆತಂಕದಲ್ಲಿ ಖಾಸಗಿ ಕಂಪನಿ ಉದ್ಯೋಗಿಗಳು ಹೊರಬಂದಿರುವ ಘಟನೆ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಟಿಸಿಎಸ್ ಕಂಪನಿಗೆ ಅನಾಮಧೇಯ ವ್ಯಕ್ತಿಯೋರ್ವ ಬಾಂಬ್ ಇದೆ ಎಂದು ಕರೆ ಮಾಡಿ ಹೇಳಿದ್ದಾನೆ. ಇದರಿಂದ ಕೆಲ ಹೊತ್ತು ಕಂಪನಿಯಲ್ಲಿ ಆತಂಕ ಸೃಷ್ಟಿಯಾಗಿತ್ತು.
ಟಿಸಿಎಸ್ ಕಂಪನಿಯ ಬಿ.ಬ್ಲಾಕ್ ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಬರುತ್ತಿದ್ದಂತೆ ವಿಷಯ ತಿಳಿದ ಉದ್ಯೋಗಿಗಳು ಆತಂಕದಿಂದ ಹೊರ ಬಂದಿದ್ದಾರೆ. ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರಿಗೆ ಕಂಪನಿಯವರು ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರ ತನಿಖೆ ವೇಳೆ ಈ ಹಿಂದೆ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಮಹಿಳಾ ಮಾಜಿ ಉದ್ಯೋಗಿ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಕೆಲಸ ಬಿಟ್ಟು ಹೋಗಿದ್ದರು. ವಿದ್ಯಾಭ್ಯಾಸ ಬಳಿಕ ರೀ ಜಾಯಿನ್ ಮಾಡಿಕೊಳ್ಳುವಂತೆ ಕಂಪನಿಗೆ ಮಹಿಳೆ ಮನವಿ ಮಾಡಿದ್ದಾರೆ, ಆದರೆ, ಇದಕ್ಕೆ ಕಂಪನಿ ಹಿಂದೇಟು ಹಾಕಿದೆ.
ಇದರಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ ಮಹಿಳೆ ಕಂಪನಿ ಮೇಲಿನ ದ್ವೇಷಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದಾರೆ. ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ನಿಂದ ತಪಾಸಣೆ ಬಳಿಕ ಹುಸಿ ಕರೆ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಮಹಿಳೆಯನ್ನು ವಶಕ್ಕೆ ಪಡೆಯಲು ಬೆಂಗಳೂರಿನಿಂದ ಬೆಳಗಾವಿಗೆ ಪೊಲೀಸರ ತಂಡ ಆಗಮಿಸುತ್ತಿದೆ.
ಇದನ್ನೂ ಓದಿ :ರೈಲ್ವೆ ನಿಲ್ದಾಣದ ಬಳಿ ಸಿಕ್ಕ ಅನುಮಾನಾಸ್ಪದ ಬಾಕ್ಸ್ನಲ್ಲಿ ಉಪ್ಪು ಪತ್ತೆ: ಶಿವಮೊಗ್ಗ ಎಸ್ಪಿ