ಕರ್ನಾಟಕ

karnataka

ETV Bharat / state

ರಾತ್ರಿ ಗಸ್ತು ತಿರುಗುವ ಪೊಲೀಸರ ಮೈಯಲ್ಲಿರಲಿದೆ ಕ್ಯಾಮರಾ!

ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರ ಬಾಡಿ ವೋರ್ನ್‌ ಕ್ಯಾಮರಾ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸೌಕರ್ಯ ರಾಜ್ಯದೆಲ್ಲೆಡೆಯ ಪೊಲೀಸರಿಗೆ ಸಿಕ್ಕರೂ ಅಚ್ಚರಿಯಿಲ್ಲ.

Body worn camera
ಬಾಡಿ ವೋರ್ನ್ ಕ್ಯಾಮೆರಾ

By

Published : Jan 8, 2023, 11:44 AM IST

ಬೆಂಗಳೂರು: ಇನ್ನು ಮುಂದೆ ರಾತ್ರಿ ಗಸ್ತು ತಿರುಗುವ ಪೊಲೀಸರೊಂದಿಗೆ ಅನುಚಿತ ವರ್ತನೆ ತೋರುವುದಾಗಲಿ ಅಥವಾ ಪೊಲೀಸರೇ ಸಾರ್ವಜನಿಕರಿಂದ ಹಣ ಸ್ವೀಕರಿಸುವುದಾಗಲಿ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇದೇ ಮೊದಲ ಬಾರಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿರುವ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಕ್ಯಾಮರಾ ಧರಿಸಿರಬೇಕೆಂಬ ಕಡ್ಡಾಯ ನಿಯಮವನ್ನು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಜಾರಿಗೊಳಿಸಿದ್ದಾರೆ‌. ಈ ಬಾಡಿ ವೋರ್ನ್‌ ಕ್ಯಾಮರಾದಿಂದಾಗುವ ಅನುಕೂಲವನ್ನು ವಿವರವಾಗಿ ನೋಡೋಣ.

ಈಗಾಗಲೇ ಸಂಚಾರಿ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮರಾ ಕಡ್ಡಾಯವಿದೆ. ಅದರಂತೆ ದಿನನಿತ್ಯ ಕರ್ತವ್ಯ ನಿರ್ವಹಿಸುವಾಗ ಸಂಚಾರಿ ಪೊಲೀಸರು ಕ್ಯಾಮರಾಗಳನ್ನು ಧರಿಸುತ್ತಿದ್ದಾರೆ. ಆದರೆ ಕಾನೂನು ಸುವ್ಯವಸ್ಥೆ ಪೊಲೀಸರಿಗೆ ಬಾಡಿ‌ ವೋರ್ನ್ ಕ್ಯಾಮರಾ ಧರಿಸುವುದು ಕಡ್ಡಾಯವಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೆಡೆ ಗಸ್ತು ತಿರುಗುವ ಪೊಲೀಸರು ಹಣ ಪೀಕುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಮಾತ್ರವಲ್ಲ, ಪೊಲೀಸರ ಬಳಿ ಜನರೇ ವಾಗ್ವಾದಕ್ಕಿಳಿದ ಪ್ರಸಂಗಗಳೂ ನಡೆಯುತ್ತಿವೆ. ಈ ಕಾರಣಕ್ಕಾಗಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಇನ್ಮಂದೆ ರಾತ್ರಿ ಗಸ್ತಿನಲ್ಲಿರುವ ತಮ್ಮ ವಿಭಾಗದ ಸಿಬ್ಬಂದಿ ಕ್ಯಾಮರಾ ಧರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ.

ಆಗ್ನೇಯ ವಿಭಾಗದಲ್ಲಿ ರಾತ್ರಿ ವೇಳೆ ಒಟ್ಟು ಎಂಟರಿಂದ ಹತ್ತು ಪೊಲೀಸ್ ಸಿಬ್ಬಂದಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಐವತ್ತು ಕ್ಯಾಮರಾಗಳನ್ನು ಇಲಾಖೆಯಿಂದ ಪಡೆಯಲಾಗಿದ್ದು ಅಗತ್ಯಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರಿಸುಮಾರು 10 ಗಂಟೆಗಳ ಕಾಲ ಸತತ ವಿಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿರುವ ಕ್ಯಾಮೆರಾದಲ್ಲಿ ಸಿಬ್ಬಂದಿಯ ಸಂಪೂರ್ಣ ಕರ್ತವ್ಯದ ಅವಧಿ ರೆಕಾರ್ಡ್ ಆಗಲಿದೆ. ಇದರಿಂದ ವಿನಾಕಾರಣ ಪೊಲೀಸರ ವಿರುದ್ಧ ಆರೋಪ ಮಾಡುವುದಾಗಲೀ ಅಥವಾ ಗಸ್ತಿನಲ್ಲಿರುವ ಪೊಲೀಸರಿಂದಲೇ ತಪ್ಪುಗಳಾಗುವುದಾಗಲೀ ಇನ್ನು ಮುಂದೆ ಸುಲಭವಲ್ಲ. ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಈ ವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದು ಡಿಸಿಪಿ ತಿಳಿಸಿದ್ದಾರೆ‌.

ಇದನ್ನೂ ಓದಿ:ಕಾರು ಕಳ್ಳತನವಾಗಿದೆ ಎಂದು ದೂರು ನೀಡಿದ ಮಾಲೀಕನನ್ನೇ ಬಂಧಿಸಿದ ಪೊಲೀಸರು

ಮೊಬೈಲ್ ಕಳ್ಳತನಕ್ಕೆ ಬ್ರೇಕ್: ಸೆಂಟ್ರಲ್ ಇಕ್ವಿಪ್​ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆ್ಯಪ್ (ಸಿಇಐಆರ್) ಈಗಾಗಲೇ ದೆಹಲಿ ಹಾಗೂ‌ ಮುಂಬೈನಲ್ಲಿ ಜಾರಿಯಲ್ಲಿದೆ. ಮೊಬೈಲ್‌ ಕಳ್ಳತನವಾದ ಬಳಿಕ ಇ-ಲಾಸ್ಟ್ ಆ್ಯಪ್ ಮೂಲಕ ದೂರು ದಾಖಲಿಸಬೇಕು. ದೂರು ದಾಖಲಾದ ಬಳಿಕ ನೇರವಾಗಿ ಸಿಇಐಆರ್ ಆ್ಯಪ್​​ಗೆ ರವಾನೆಯಾಗುತ್ತದೆ‌. ಸಿಇಐಆರ್ ಅಪ್ಲಿಕೇಷನ್​​ನಲ್ಲಿ ಮೊಬೈಲ್ ನಂಬರ್ ಹಾಗೂ ಐಎಂಇಐ ನಂಬರ್ ಹಾಕಿದ್ರೆ ಮೊಬೈಲ್ ಆ್ಯಕ್ಟಿವೇಷನ್ ಸಂಪೂರ್ಣ ಬ್ಲಾಕ್‌ ಆಗಲಿದೆ. ಖದೀಮರು ಮೊಬೈಲ್ ಕದ್ದರೂ ಬಳಸಲು ಸಾಧ್ಯವಿಲ್ಲದಂತಾಗುತ್ತದೆ. ಆ ಮೂಲಕ ಮೊಬೈಲ್ ಕಳ್ಳತನಕ್ಕೆ ಬ್ರೇಕ್ ಹಾಕಲು ಬೆಂಗಳೂರು ನಗರ ಪೊಲೀಸರು ಮುಂದಾಗಿದ್ದಾರೆ.

ಟ್ರಾಫಿಕ್​ ಪೊಲೀಸರಿಗೆ ಬಾಡಿ ಕ್ಯಾಮರಾ: ಈ ಮೊದಲು, ಅಂದರೆ 2021 ರಲ್ಲಿ ವಾಹನ ತಪಾಸಣೆ ನಡೆಸುವ ಸಂಚಾರಿ ಪೊಲೀಸರಿಗೆ ಬಾಡಿ ಕ್ಯಾಮರಾವನ್ನು ಒದಗಿಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ 2022 ರ ಮಾರ್ಚ್​ ತಿಂಗಳಲ್ಲಿ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಅನುಚಿತ ವರ್ತನೆ ಹಾಗೂ ಘರ್ಷಣೆಗಳಿಗೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರಿಗೆ ಬಾಡಿ ವೋರ್ನ್ ಕ್ಯಾಮರಾವನ್ನು ಒದಗಿಸಲಾಗಿತ್ತು. ಇದೀಗ ರಾತ್ರಿ ಗಸ್ತು ತಿರುಗುವ ಪೊಲೀಸರ ಸುರಕ್ಷಿತ ದೃಷ್ಟಿಯಿಂದ ಅವರಿಗೂ ಬಾಡಿ ವೋರ್ನ್​ ಕ್ಯಾಮರಾ ಒದಗಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ:ಕಲಬುರಗಿಯಲ್ಲಿ ಹಾಡಹಗಲೇ ಫೈರಿಂಗ್​: ಉದ್ಯಮಿ ಮೇಲೆ‌ ದಾಳಿ, ಜಗಳ ನೋಡುತ್ತಿದ್ದವನ ಕಾಲು ಸೇರಿದ ಗುಂಡು

ABOUT THE AUTHOR

...view details