ಬೆಂಗಳೂರು: ಲಾಕ್‌ಡೌನ್ ಜಾರಿಯಾದ ಬಳಿಕ ನಗರದಲ್ಲಿರುವ ಭಿಕ್ಷುಕರು ಮತ್ತು ವಲಸೆ ಕಾರ್ಮಿಕರು ಆಹಾರಕ್ಕಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ ವಿಜಯನಗರದ ಐರನ್ ಟೆಂಪಲ್ ಜಿಮ್ ಮಾಲೀಕ ವಿಶ್ವಾಸ್‌ಗೌಡ ನಿತ್ಯವೂ ಉಚಿತವಾಗಿ ಆಹಾರ ನೀರು ಪೂರೈಸುತ್ತಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಅತ್ತ ತಮ್ಮ ಊರುಗಳಿಗೂ ಹೋಗಲಾಗದೆ, ಇತ್ತ ನಗರದಲ್ಲಿಯೂ ಇರಲಾಗದೆ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಮತ್ತು ದೇವಸ್ಥಾನಗಳ ಎದುರು ಭಿಕ್ಷೆ ಬೇಡಿ ಜೀವಿಸುತ್ತಿದ್ದ 500 ಕ್ಕೂ ಹೆಚ್ಚು ಜನರಿಗೆ ವಿಶ್ವಾಸ್‌ಗೌಡ ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ನಿರ್ಗತಿಕರಿಗೆ ಅನ್ನ ದಾಸೋಹ ನಡೆಸುತ್ತಿರುವ ಬಾಡಿಬಿಲ್ಡರ್ ಪ್ರೊಫೆಷನಲ್ ಬಾಡಿಬಿಲ್ಡರ್ ಆಗಿರುವ ವಿಶ್ವಾಸ್‌ಗೌಡ ಲಾಕ್‌ಡೌನ್ ಜಾರಿಯಾದ ಬಳಿಕ ಆಹಾರವಿಲ್ಲದೇ ಪರದಾಡುತ್ತಿದ್ದ ಜನರಿಗೆ ನೆರವಾಗಲು ತಮ್ಮದೇ ಜಿಮ್‌ನಲ್ಲಿ ಕಸರತ್ತು ಮಾಡುತ್ತಿದ್ದ ಹತ್ತು ಮಂದಿ ಯುವಕರ ಗುಂಪು ಕಟ್ಟಿಕೊಂಡು ಈ ಅನ್ನ ದಾಸೋಹ ಕಾರ್ಯ ಆರಂಭಿಸಿದ್ದಾರೆ. ವಿಶ್ವಾಸ್‌ಗೌಡ, ಅಭಿ, ಪವನ್, ರಾಮ್‌ಚರಣ್, ಮನು, ಮನೋಜ್, ನವೀನ್, ಆಕಾಶ್, ಮಹೇಶ್, ಶಿವು ಮತ್ತು ಗುರು ಈ ತಂಡದಲ್ಲಿದ್ದು ತಲಾ ಇಬ್ಬರು ಒಂದೊಂದು ಬೈಕ್‌ನಲ್ಲಿ ತೆರಳಿ ಆಹಾರ ಹಂಚಿ ಬರುತ್ತಾರೆ.
ಪೊಲೀಸರಿಂದ ಐದು ಬೈಕ್‌ಗಳಿಗೆ ಪಾಸ್ ಪಡೆದುಕೊಂಡು 200 ಜನರಿಗೆ ಆಹಾರ ಪೂರೈಸುತ್ತಿದ್ದ ಈ ತಂಡದ ಸದಸ್ಯರು ಬೇಡಿಕೆ ಹೆಚ್ಚಿದ್ದರಿಂದ ಇದೀಗ 500 ರಿಂದ 800 ಮಂದಿಗೆ ಆಹಾರ ಪೂರೈಸುತ್ತಿದ್ದಾರೆ. ವಿಜಯನಗರ ಸುತ್ತಮುತ್ತಲಿನ ಸುಮ್ಮನಹಳ್ಳಿ ಸಿಗ್ನಲ್, ಕಂಠೀರವ ಸ್ಟುಡಿಯೋ, ಗೊರಗುಂಟೆ ಪಾಳ್ಯ, ಯಶವಂತಪುರ, ಮಲ್ಲೇಶ್ವರಂ ಆಟದ ಮೈದಾನ, ಸರ್ಕಲ್ ಮಾರಮ್ಮ ದೇವಸ್ಥಾನ, ಕಾಡುಮಲ್ಲೇಶ್ವರ ದೇವಸ್ಥಾನ, ಕೆ.ಸಿ ಜನರಲ್ ಆಸ್ಪತ್ರೆ, ರಾಮಮಂದಿರ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ ಸುತ್ತಮುತ್ತ ನಿರ್ಗತಿಕರಾಗಿರುವ ವಲಸೆ ಕಾರ್ಮಿಕರಿಗೆ ಮತ್ತು ಭಿಕ್ಷುಕರಿಗೆ ನಿತ್ಯವೂ ತಾವೇ ಸಿದ್ಧಪಡಿಸಿದ ಆಹಾರ ಮತ್ತು ನೀರಿನ ಬಾಟಲಿಗಳನ್ನು ಹಂಚುತ್ತಿದ್ದಾರೆ.
ಇದೇ ವೇಳೆ ನಿರ್ಗತಿಕ ಜನರಿಗೆ ಹೊದ್ದು ಮಲಗಲು ತಮಗೆ ಸನ್ಮಾನಿಸಿದ ಶಾಲುಗಳನ್ನೇ ಕೊಟ್ಟು ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ. ಸಂಕಷ್ಟದಲ್ಲಿರುವ ನಿರ್ಗತಿಕರಿಗೆ ಆಹಾರ ಪೂರೈಸುತ್ತಿರುವುದು ಸಂತಸದ ವಿಚಾರವಾದರೂ ಅವರ ಪರಿಸ್ಥಿತಿ ಗಮನಿಸಿದಾಗ ತೀವ್ರ ಬೇಸರವಾಗುತ್ತದೆ. ನಮ್ಮಿಂದ ಆಹಾರ ಪಡೆದುಕೊಳ್ಳುವ ಬಹುತೇಕ ಜನರು ಭಿಕ್ಷುಕರಲ್ಲ. ಬದಲಿಗೆ ವಲಸೆ ಕಾರ್ಮಿಕರು. ಸದ್ಯ ಅವರಿಗೆ ಎಲ್ಲೂ ಹೋಗಲು ಸಾಧ್ಯವಾಗದೆ ಹೀಗೆ ಬೇಡಿ ತಿನ್ನಬೇಕಾದ ಪರಿಸ್ಥಿತಿ ಎದುರಾಗಿದೆ. ಪೊಲೀಸರು ನಗರದಿಂದ ಹೊರ ಹೋಗದಂತೆ ತಡೆದಿರುವುದರಿಂದ ಸಾವಿರಾರು ಜನ ತಮ್ಮ ಹಳ್ಳಿಗಳಿಗೆ ವಾಪಸಾಗಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮಗೂ ಪೊಲೀಸರು ಸೀಮಿತ ವ್ಯಾಪ್ತಿಗೆ ಮಾತ್ರ ಪಾಸ್ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳು ನಮ್ಮ ಸೇವೆ ಬಳಸಿಕೊಳ್ಳಲು ಮುಂದಾದರೆ ಮತ್ತಷ್ಟು ಸಂತ್ರಸ್ತರಿಗೆ ಆಹಾರ ಪೂರೈಸಲು ಸಿದ್ಧರಿದ್ದೇವೆ ಎನ್ನುತ್ತಾರೆ ವಿಶ್ವಾಸ್‌ಗೌಡ.
ಒಟ್ಟಾರೆ ವಿಶ್ವಾಸ್‌ಗೌಡ ಅವರ ಈ ಮಾನವೀಯ ಕಾರ್ಯ ಹಲವು ಸಂತ್ರಸ್ತರ ಹೊಟ್ಟೆ ತುಂಬಿಸುತ್ತಿದೆ. ಅವರ ಸಾಮಾಜಿಕ ಕಾರ್ಯಕ್ಕೆ ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ.