ಬೆಂಗಳೂರು : ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳಿಗೆ ರಾಜ್ಯ ಮಟ್ಟದ ಮೌಲ್ಯಾಂಕನ (ಬೋರ್ಡ್) ಪರೀಕ್ಷೆ ನಡೆಸಲು ಸರ್ಕಾರಕ್ಕೆ ಅನುಮತಿ ನೀಡಿರುವ ಹೈಕೋರ್ಟ್ನ ದ್ವಿಸದಸ್ಯ ಪೀಠದ ಆದೇಶ ಸುಪ್ರೀಂಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ಖಾಸಗಿ ಶಾಲೆಗಳು ಮತ್ತೆ ವಿಷಯ ಪ್ರಸ್ತಾಪ ಮಾಡಿವೆ.
ಬೋರ್ಡ್ ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿದ್ದ ಸುತ್ತೋಲೆಗಳನ್ನು ರದ್ದುಪಡಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ದ್ವಿ ಸದಸ್ಯ ಪೀಠ ಪರೀಕ್ಷೆ ನಡೆಸುವುದಕ್ಕೆ ಅನುಮತಿ ನೀಡಿತ್ತು. ಈ ಆದೇಶವನ್ನು ಖಾಸಗಿ ಶಾಲೆಗಳು ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಬೋರ್ಡ್ ಪರೀಕ್ಷೆಗೆ ತಡೆ ನೀಡಲು ನಿರಾಕರಿಸಿತ್ತು.
ಇದೀಗ ಮಂಗಳವಾರ ಬೆಳಗ್ಗೆ ಹೈಕೋರ್ಟಿನ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಅಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠದ ಮುಂದೆ ಖಾಸಗಿ ಶಾಲೆಗಳ ಪರ ವಕೀಲರು, 5 ಮತ್ತು 8 ತರಗತಿಗಳಿಗೆ ಬೋರ್ಡ್ ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಸಿದ ನ್ಯಾಯಪೀಠ, ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿದೆ. ಈ ಸಂದರ್ಭದಲ್ಲಿ ನಾವು ಯಾವುದೇ ರೀತಿಯಲ್ಲಿಯೂ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ನಿಮ್ಮ ಮನವಿಯನ್ನು ತಿಳಿಸಿ ಎಂದು ಸೂಚನೆ ನೀಡಿತು. ಅಲ್ಲದೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಮತ್ತೆ ಹೈಕೋರ್ಟ್ ನಲ್ಲಿ ಪ್ರಸ್ತಾಪ ಮಾಡುವುದು ಉತ್ತಮ ಬೆಳವಣಿಗೆ ಅಲ್ಲ ಎಂದು ಸೂಚನೆ ನೀಡಿದರು.
ಹೈಕೋರ್ಟ್ ಆದೇಶದಲ್ಲೇನಿತ್ತು?: ಸರ್ಕಾರದ ಸುತ್ತೋಲೆ ರದ್ದುಪಡಿಸಿ ಮಾ.10ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ನೀಡಲಾಗಿದೆ. ರಾಜ್ಯ ಪಠ್ಯಕ್ರಮವಿರುವ ಶಾಲೆಗಳಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗೆ ಅನುಮತಿಸಲಾಗುತ್ತಿದ್ದು, ಸರ್ಕಾರ ಮಾ.27ರಿಂದ ಪರೀಕ್ಷೆ ನಡೆಸಬೇಕು. ಪ್ರಶ್ನೆ ಪತ್ರಿಕೆಯಲ್ಲಿ ಪಠ್ಯಕ್ರಮದ ಹೊರಗಿನ ಯಾವುದೇ ಪ್ರಶ್ನೆಗಳಿರದಂತೆ ಸರ್ಕಾರ ಖಾತ್ರಿ ಪಡಿಸಬೇಕು. ಪರೀಕ್ಷಾ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸದೆ, ಆಯಾ ಶಾಲೆಗಳಿಗಷ್ಟೇ ರವಾನಿಸಬೇಕು. ಶಾಲೆಗಳೂ ಫಲಿತಾಂಶವನ್ನು ವಿದ್ಯಾರ್ಥಿಗಳಿಗಷ್ಟೇ ತಲುಪಿಸಬೇಕು ಎಂದು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಹೇಳಿದೆ.