ಬೆಂಗಳೂರು:ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಾಳೆ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಈ ಹಿಂದೆಯು ನಾಲ್ಕು ದಿನ ಕೆಲಸ ನಿಲ್ಲಿಸಿ, ಫ್ರೀಡಂ ಪಾರ್ಕ್ನಲ್ಲಿ ಮುಷ್ಕರ ಮಾಡಿದ್ದರು. ಇದೀಗ ಮತ್ತೆ ಸಾಂಕೇತಿಕ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ. ನಾಳೆ ಶಾಂತಿನಗರದ ಬಿಎಂಟಿಸಿ ಕಚೇರಿಯ ಮುಂಭಾಗ ಸಾವಿರಾರು ನೌಕರರು ಪ್ರತಿಭಟನೆ ನಡೆಸಲಿದ್ದು, ಬಸ್ ಸಂಚಾರ ಬಂದ್ ಮಾಡೋದಿಲ್ಲ ಅಂತ ಸಾರಿಗೆ ಮುಖಂಡರು ತಿಳಿಸಿದ್ದಾರೆ.
ಮೂರು ತಿಂಗಳ ಒಳಗೆ ನೌಕರರ ಬೇಡಿಕೆ ಈಡೇರಿಸುತ್ತೇವೆ ಎಂದಿದ್ದ ಸರ್ಕಾರ, ಮಾತು ಕೊಟ್ಟು ಯೂ ಟರ್ನ್ ಹೊಡೆದಿದೆ. ಮುಷ್ಕರ ನಡೆಸಿ ಎರಡು ತಿಂಗಳು ಕಳೆದರೂ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ ಅಂತ ಆರೋಪಿಸಿದ್ದಾರೆ.
ಸಂಘಟನೆ ಪ್ರಧಾನ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಜಂಟಿ ಸಮಿತಿಗಳು ಸೇರಿ ಬಿಎಂಟಿಸಿ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿ, ಅಲ್ಲೇ ಪ್ರತಿಭಟನೆ ಮಾಡಲಿದ್ದೇವೆ ಎಂದ ಅವರು, ಯಾವುದೇ ವಾಹನ ನಿಲ್ಲಿಸುವ ಕಾರ್ಯಕ್ರಮ ಇಲ್ಲ ಎಂದು ಸ್ಪಷ್ಟಪಡಿಸಿದರು. 10 ಗಂಟೆಗೂ ಹೆಚ್ಚು ಕಾಲ ಕೆಲಸ ನಿರ್ವಹಿಸಿದರೂ ಅರ್ಧ ಸಂಬಳ ಪಾವತಿಸಲಾಗುತ್ತಿದೆ. ಕೊರೊನಾ ಹೆಸರಲ್ಲಿ ಕಿರುಕುಳ ನಡೆಯುತ್ತಿದ್ದು, ಈ ಹಿಂದೆಯೂ ಇದೇ ವ್ಯವಸ್ಥೆ ಇತ್ತು ಎಂದು ದೂರಿದರು.