ಬೆಂಗಳೂರು: ನವೀಕರಿಸಬಹುದಾದ ಇಂಧನಮೂಲಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ನೀಡುತ್ತಿದೆ. ಬಿಎಂಟಿಸಿಗೆ ಎಲೆಕ್ಟ್ರಿಕ್ ಬಸ್ ಪೂರೈಕೆ ಕುರಿತು ಇಂದೇ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಇವಿ (ಎಲೆಕ್ಟ್ರಿಕ್ ವೆಹಿಕಲ್) ಅಭಿಯಾನ 2022 ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇದರೊಂದಿಗೆ ಬೆಂಗಳೂರಿನ 152 ಇವಿ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ಗಳನ್ನು ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಸಿಎಂ, ಜಗತ್ತು ಬದಲಾಗುತ್ತಿದೆ, ಅದರಂತೆ ಇಂಧನ ಜಗತ್ತು ಬದಲಾವಣೆ ಆಗುತ್ತಿದೆ, ಇಂಧನದ ಅವಶ್ಯಕತೆ ಸಾಕಷ್ಟಿದೆ, ಆದರೆ ಇಂಧನ ಇತ್ತೀಚಿಗೆ ಪರಿಸರ ಹಾನಿಗೆ ಸೇರಿಕೊಂಡಿದೆ. ಪರಿಸರವನ್ನು ಕಲುಷಿತ ಮಾಡುವಲ್ಲಿ ವಾಹನಗಳು ಹೊರಸೂಸುವಿಗೆ ಹೊಗೆ ಕಾರಣವಾಗುತ್ತಿದೆ. ಹಾಗಾಗಿ ನವೀಕರಿಸಬಹುದಾದ ಇಂಧನಕ್ಕೆ ಒತ್ತು ಕೊಡುವ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಈಗಾಗಲೇ ಹತ್ತು ಹಲವಾರು ಸಂಶೋಧನೆಯಿಂದ ಟೂ ವೀಲರ್‌ಗಳನ್ನು, ಕಾರು, ಬಸ್ಸುಗಳನ್ನು ಇವಿಗೆ ಜೋಡಣೆ ಮಾಡಲಾಗಿದೆ. ನವೀಕರಿಸಬಹುದಾದ ಇಂಧನದಲ್ಲಿ ವೈಜ್ಞಾನಿಕ ಸಂಶೋಧನೆ ಮಾಡಬೇಕಾದ ಅವಶ್ಯಕತೆ ಇದೆ. ಎಲೆಕ್ಟ್ರಿಕ್ ವಾಹನಗಳಿಗೆ ಬೇಕಾದ ಚಾರ್ಜರ್‌ಗಳನ್ನು ಇವಿ ನೀತಿ ಮಾಡಿ ಬೆಸ್ಕಾಂ ಮೂಲಕ ಒದಗಿಸುತ್ತಿದ್ದೇವೆ. ಇನ್ನೂ ಚಾರ್ಜರ್‌ಗಳ ಅವಶ್ಯಕತೆ ಇದೆ ಅದನ್ನು ಬೆಸ್ಕಾಂ ಮಾಡುತ್ತದೆ ಅನ್ನೋ ನಂಬಿಕೆ ಇದೆ. ಇವಿ ಬಸ್‌ಗಳನ್ನು ಮಾಡಲು ನಿರ್ಣಯ ಮಾಡಿದ್ದೇವೆ, ಇಂದೇ ಬಿಎಂಟಿಸಿಗೆ ಇವಿ ಬಸ್‌ಗಳನ್ನು ಖರೀದಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಯಿ ತಿಳಿಸಿದರು.