ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಯಾವಾಗಪ್ಪ ಎಲೆಕ್ಟ್ರಿಕ್ ಬಸ್ಸು ಓಡಾಡುತ್ತೆ ಅಂತಾ ಎದುರು ನೋಡುತ್ತಿದ್ದ ಜನರಿಗೆ ಬಿಎಂಟಿಸಿ ಗುಡ್ನ್ಯೂಸ್ ನೀಡಿದೆ. ಬಿಎಂಟಿಸಿಯ ಮೊದಲ ಎಲೆಕ್ಟ್ರಿಕ್ ಬಸ್ಗೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ ಅನಾವರಣಗೊಳ್ಳಲಿದೆ.
ಬಿಎಂಟಿಸಿಯ ಘಟಕ 37ರ ಕೆಂಗೇರಿಯಲ್ಲಿ ಸಂಸ್ಥೆಯ ಮೊದಲ ವಿದ್ಯುತ್ ಬಸ್ಸಿನ ಅನಾವರಣ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಆಗಲಿದೆ.ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮುನ್ನ, ನಿಗಮವು ಸ್ಮಾರ್ಟ್ ಸಿಟಿ ಯೋಜನೆಯಡಿ 90 ನಾನ್ ಎಸಿ ಇ-ಬಸ್‌ಗಳನ್ನು ರಸ್ತೆಗಿಳಿಸಲು ತೀರ್ಮಾನಿಸಿತ್ತು. ಆದರೆ ಕೋವಿಡ್ನಿಂದಾಗಿ ಇ-ಬಸ್‌ಗಳ ಸೇವೆ ಪ್ರಾರಂಭಮಾಡಲು ಸಾಧ್ಯವಾಗಿರಲಿಲ್ಲ.
9 ಮೀಟರ್ ಉದ್ದದ 31 ಆಸನಗಳ ಇ-ಬಸ್ ಲಭ್ಯವಾಗುತ್ತಿದ್ದು, ಇ-ಬಸ್ ಸ್ವೀಕರಿಸಿದ ನಂತರ ಟೆಂಡರ್‌ನಲ್ಲಿನ ನಿರ್ದಿಷ್ಟತೆಗಳ ಪ್ರಕಾರ ವಾಹನವನ್ನು ಪೂರೈಸಲಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಗರದ ರಸ್ತೆಗಳಲ್ಲಿ ಓಡಿಸಲಾಗುತ್ತದೆ. ಅನುಮೋದನೆ ನೀಡಿದ ನಂತರ ಉಳಿದ ಇ-ಬಸ್‌ಗಳನ್ನು ತರಿಸಿಕೊಂಡು ರೋಡಿಗಿಳಿಸಲಾಗುವುದು. ಸದ್ಯಕ್ಕೆ ಪ್ರಾಯೋಗಿಕವಾಗಿ ಒಂದು ಇ-ಬಸ್ಸು ರೋಡಿಗಿಳಿಯಲಿದೆ.