ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಇದರ ಬೆನ್ನಲ್ಲೇ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿ ರಾತ್ರಿ ನಿಷೇಧಾಜ್ಞೆ ಮುಂದುವರೆಸಿ, ವಾರಾಂತ್ಯದ ನಿಷೇಧಾಜ್ಞೆ ಜಾರಿ ಮಾಡಿದೆ. ಜೊತೆಗೆ ಹಲವು ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.
ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ತುರ್ತು ಅಗತ್ಯ ಸೇವೆಗೆ ಒಳಪಡಲಿವೆ. ವಾರಾಂತ್ಯದ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಾರಿಗೆ ಸೇವೆಗಳಲ್ಲಿ ಕೆಲ ಬದಲಾವಣೆಯಾಗಿದೆ. ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಲಿದ್ದು, ಮೆಟ್ರೋ ಓಡಾಟ ಎಂದಿನಂತೆ ಇರಲಿದೆ.
ವಾರಾಂತ್ಯದ ಕರ್ಫ್ಯೂ ವೇಳೆ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ:
ಶನಿವಾರ - ಭಾನುವಾರ ಎಂದಿನಂತೆ ಹಸಿರು ಮತ್ತು ನೇರಳೆ ಎರಡು ಮಾರ್ಗದಲ್ಲೂ ಮೆಟ್ರೋ ಕಾರ್ಯಾಚರಣೆ ಇರಲಿದ್ದು, ಶೇಕಡಾ 50ರಷ್ಟು ಪ್ರಯಾಣಿಕರಿಗೆ ಮಾತ್ರ ಮೆಟ್ರೋದಲ್ಲಿ ಅವಕಾಶ ನೀಡಲಾಗುತ್ತಿದೆ. ಸದ್ಯ ಮೆಟ್ರೋದಲ್ಲಿ ನಿತ್ಯ 1,800 ರಿಂದ 1,900 ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಕೋವಿಡ್ ಹೆಚ್ಚಳವಾದ ಕಾರಣ 800 ರಿಂದ 900 ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ನಿಯಮದನ್ವಯ ಮೆಟ್ರೋ ಓಡಿಸಲು ನಿರ್ಧಾರ ಮಾಡಲಾಗಿದ್ದು, ಸಂಚಾರದ ಅವಧಿ ಕಡಿತಗೊಳಿಸಲಾಗಿದೆ.
ಸದ್ಯ 10ರಿಂದ 15 ನಿಮಿಷಕ್ಕೊಂದು ಮೆಟ್ರೋ ರೈಲು ಕಾರ್ಯಾಚರಣೆಯಾಗುತ್ತಿದೆ. ಕರ್ಫ್ಯೂ ವೇಳೆ ಅರ್ಧ ಗಂಟೆಗೊಂದು ಮೆಟ್ರೋ ರೈಲು ಓಡಾಡಲಿದೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ.