ಬೆಂಗಳೂರು:74ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ಹಾಗು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ನೆರವೇರಿಸಿದರು.
75ರ ಸ್ವಾತಂತ್ರ್ಯೋತ್ಸವದ ಒಳಗೆ ಬಿಎಂಟಿಸಿ ಸ್ವಾವಲಂಬಿ ಸಂಸ್ಥೆ ಆಗಬೇಕು: ನಂದೀಶ್ ರೆಡ್ಡಿ - ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಕಚೇರಿ
ಬೆಂಗಳೂರಿನ ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದ್ದು, ಮುಂದಿನ ವರ್ಷದ ಸ್ವಾತಂತ್ರ್ಯ ದಿನಾಚರಣೆ ಒಳಗಡೆ ನಮ್ಮ ಸಂಸ್ಥೆ ಸೆಲ್ಫ್ ಸಫೀಷಿಯಂಟ್ ಸಂಸ್ಥೆಯಾಗಿರಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ನಂದೀಶ್ ರೆಡ್ಡಿ ಕರೆ ನೀಡಿದ್ದಾರೆ.
ಧ್ವಜಾರೋಹಣದ ಬಳಿಕ ನಿಗಮದ ಸಿಬ್ಬಂದಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದ ನಂದೀಶ್ ರೆಡ್ಡಿ, ನಿಗಮ ಕಳೆದ ಹಲವು ವರ್ಷಗಳಲ್ಲಿ ಉನ್ನತ ಸಾಧನೆ ಮಾಡಿದೆ. ನಾವೆಲ್ಲರೂ ಸೇರಿ ಬಹಳಷ್ಟು ಯೋಜನೆಗಳನ್ನು ಮಾಡುತ್ತಿದ್ದೇವೆ. ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದ ಕರೆಯಂತೆ ನಮ್ಮ ನಿಗಮ ಸಾಕಷ್ಟು ಯೋಜನೆಯಿಂದ ಕೂಡಿದೆ.
ಬಿಎಂಟಿಸಿ ವಿಭಾಗದಲ್ಲಿ ಪ್ರತ್ಯೇಕ ಬಸ್ ಪಥ, ಸೈಕಲ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 75ನೇ ಸ್ವಾತಂತ್ರ್ಯೋತ್ಸವದ ಒಳಗೆ ಬಿಎಂಟಿಸಿ ಸಂಸ್ಥೆ ಸೆಲ್ಫ್ ಸಫೀಷಿಯಂಟ್ ಆಗಿರಬೇಕು ಎನ್ನುವ ಸಂಕಲ್ಪವನ್ನು ನಾವೆಲ್ಲ ಮಾಡೋಣ. ಸರ್ಕಾರದ ಮೇಲೆ ಹೆಚ್ಚು ಅವಲಂಬಿತವಾಗದೆ ನಮ್ಮ ಸಂಸ್ಥೆಯನ್ನು ಸ್ವಾವಲಂಭನೆಯತ್ತ ಕೊಂಡೊಯ್ಯೋಣ ಎಂದು ಕರೆ ನೀಡಿದರು.