ಕರ್ನಾಟಕ

karnataka

ETV Bharat / state

ರಜತ ಮಹೋತ್ಸವದ ಭರ್ಜರಿ ಕೊಡುಗೆ : ನೌಕರರ ವಿರುದ್ಧದ ಶಿಸ್ತುಕ್ರಮ ಇತ್ಯರ್ಥಪಡಿಸಿದ ಬಿಎಂಟಿಸಿ - BMTC

ರಜತ ಮಹೋತ್ಸವದ ಹಿನ್ನೆಲೆ ಒಂದು ಬಾರಿ ಅನ್ವಯವಾಗುವಂತೆ ನೌಕರರ ವಿರುದ್ಧದ ಶಿಸ್ತುಕ್ರಮವನ್ನು ಬಿಎಂಟಿಸಿ ಇತ್ಯರ್ಥಪಡಿಸಿದೆ.

bmtc-settles-disciplinary-actions-against-employees
ರಜತ ಮಹೋತ್ಸವದ ಭರ್ಜರಿ ಕೊಡುಗೆ : ನೌಕರರ ವಿರುದ್ಧದ ಶಿಸ್ತುಕ್ರಮ ಇತ್ಯರ್ಥಪಡಿಸಿದ ಬಿಎಂಟಿಸಿ

By ETV Bharat Karnataka Team

Published : Dec 31, 2023, 3:06 PM IST

ಬೆಂಗಳೂರು: 25 ವರ್ಷಗಳ ಸೇವೆಯೊಂದಿಗೆ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬಿಎಂಟಿಸಿಯು ಶಿಸ್ತು ಕ್ರಮಕ್ಕೆ ಒಳಗಾಗಿರುವ ತನ್ನ ಸಿಬ್ಬಂದಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಎಲ್ಲ ಶಿಸ್ತು ಕ್ರಮಗಳ ವಿಲೇವಾರಿ ಮಾಡುವ ಮೂಲಕ ರಜತ ಮಹೋತ್ಸವಕ್ಕೆ ಭರ್ಜರಿ ಉಡುಗೊರೆ ನೀಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಇದು ಸಂಸ್ಥೆಯ ಏಳಿಗೆಗಾಗಿ ಶ್ರಮವಹಿಸಿ ದುಡಿದಿರುವ ಹಾಗೂ ದುಡಿಯುತ್ತಿರುವ ಎಲ್ಲಾ ವರ್ಗದ ನೌಕರರ ಪರಿಶ್ರಮದಿಂದ ಸಾಧ್ಯವಾಗಿದೆ. ಸಂಸ್ಥೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ/ತಾಂತ್ರಿಕ ಸಿಬ್ಬಂದಿಗಳ ಪರಿಶ್ರಮವನ್ನು ಗುರುತಿಸಿ ಅವರುಗಳಲ್ಲಿ ಸಂಸ್ಥೆಯ ಬಗ್ಗೆ ಇನ್ನೂ ಹೆಚ್ಚಿನ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ, ನೌಕರರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ನೌಕರರಲ್ಲಿ ಸಂಸ್ಥೆಯ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡಿಸಲು ಬಿಎಂಟಿಸಿ ಮುಂದಾಗಿದೆ.

ನೌಕರರಲ್ಲಿ ದಕ್ಷತೆ, ಸೇವಾ ಮನೋಭಾವ, ಕರ್ತವ್ಯಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಹಾಗೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಉತ್ಸುಕತೆಯಿಂದ ಕರ್ತವ್ಯ ನಿರ್ವಹಿಸಲು ಸಂಸ್ಥೆಯು ನೌಕರರ ಹಿತಾಸಕ್ತಿಯನ್ನು ಕಾಪಾಡಲು, ಮಾನವ ಸಂಪನ್ಮೂಲ ಸದ್ಬಳಕೆ ಹಾಗೂ ಅನುಸೂಚಿಗಳ ದೈನಂದಿನ ಸುಗಮ ಕಾರ್ಯಾಚರಣೆಯ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುವುದು ಅವಶ್ಯಕವಾಗಿದೆ.

ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ/ ತಾಂತ್ರಿಕ ಸಿಬ್ಬಂದಿಗಳು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗಿರುವ ಹಾಗೂ ಶಿಸ್ತು ಪ್ರಕರಣಗಳಲ್ಲಿ ಭಾಗಿಯಾಗಿರುವ ನೌಕರರುಗಳಿಗೆ ಅವರ ಪ್ರವೃತ್ತಿಯಲ್ಲಿ ಬದಲಾವಣೆ/ಸುಧಾರಣೆ ತಂದುಕೊಳ್ಳಲು ಒಂದು ಅವಕಾಶವನ್ನು ಕಲ್ಪಿಸುವುದು ಸೂಕ್ತವೆಂದು ಬಿಎಂಟಿಸಿ ನಿರ್ಧರಿಸಿದೆ. ಈ ಸಂಬಂಧ ಸಂಸ್ಥೆಯಲ್ಲಿ ಪ್ರಸ್ತುತ ದಿನಾಂಕ 30-11-2023ರ ಅಂತ್ಯಕ್ಕೆ ಚಾಲನಾ/ತಾಂತ್ರಿಕ ಸಿಬ್ಬಂದಿ ವಿರುದ್ಧ ದಾಖಲಾಗಿ ಬಾಕಿ ಇರುವ ಗೈರುಹಾಜರಿ ಹಾಗೂ ಶಿಸ್ತು ಪ್ರಕರಣಗಳ ಗಂಭೀರತೆಗಳನ್ನು ಅವಲೋಕಿಸಿ ಸಂಸ್ಥೆಯ ನೌಕರರ ಹಿತದೃಷ್ಟಿಯಿಂದ ವಿವಿಧ ಹಂತಗಳಲ್ಲಿ ತರಬೇತಿ ನೌಕರರನ್ನೊಳಗೊಂಡಂತೆ ನೌಕರರ ವಿರುದ್ಧ ಬಾಕಿ ಇರುವ ಗೈರುಹಾಜರಿ/ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಇತ್ಯರ್ಥಪಡಿಸಲು ನಿರ್ಧರಿಸಿದೆ ಎಂದು ಬಿಎಂಟಿಸಿ ಪ್ರಕಟಣೆ ಮೂಲಕ ತಿಳಿಸಿದೆ.

ಒಂದು ಬಾರಿಗೆ ಅನ್ವಯವಾಗುವಂತೆ ಬಾಕಿ ಇರುವ ಎಲ್ಲ ಶಿಸ್ತುಕ್ರಮ ವಿಲೇವಾರಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅದರಂತೆ ದಿನಾಂಕ 30-11-2023ರ ಅಂತ್ಯಕ್ಕೆ ವಿವಿಧ ಹಂತದಲ್ಲಿ ಚಾಲನಾ / ತಾಂತ್ರಿಕ ಸಿಬ್ಬಂದಿಗಳ ವಿರುದ್ಧ ಘಟಕ ಮಟ್ಟದಲ್ಲಿ ಹಾಗೂ ಕೇಂದ್ರ ಕಚೇರಿ ವಲಯ ಮಟ್ಟದಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇದ್ದ 2536 ಗೈರುಹಾಜರಿ ಪ್ರಕರಣಗಳು ಹಾಗೂ 4424 ಶಿಸ್ತು ಪ್ರಕರಣಗಳು ಸೇರಿ ಒಟ್ಟು 6960 ಪ್ರಕರಣಗಳನ್ನು ವಿಲೇವಾರಿಗೊಳಿಸಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

ಇದನ್ನೂ ಓದಿ :ನಿದ್ರೆ ಮಂಪರಿಗೆ KSRTC ಬ್ರೇಕ್: ಚಹಾ, ಕಾಫಿ ಹೀರಲು ರಾತ್ರಿ ಪಾಳಿ ಚಾಲಕರಿಗೆ ಥರ್ಮೋ ಫ್ಲಾಸ್ಕ್

ABOUT THE AUTHOR

...view details