ಬೆಂಗಳೂರು :ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಲೇಲ್ಯಾಂಡ್ ವಾಹನ ಇಂದು ಮೆಜೆಸ್ಟಿಕ್‌ನಿಂದ ವಿದ್ಯಾನಗರಕ್ಕೆ ಚಲಿಸುತ್ತಿತ್ತು. ಮಧ್ಯಾಹ್ನ 12 ಘಂಟೆ ಸಮಯದಲ್ಲಿ ಎಸ್‌ಜೆಪಿ ಕಾಲೇಜಿನ ಬಳಿ ಬೆಂಕಿ ಅವಘಡಕ್ಕೆ ಒಳಗಾಗಿತ್ತು. ಬಸ್‌ನ ಇಂಜಿನ್ ಬಾನೆಟ್ ಒಳಗಿನಿಂದ ಹೊಗೆ ಕಾಣಿಸಿಕೊಂಡ ಕೂಡಲೇ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ನಂತರದಲ್ಲಿ ಚಾಲಕ ಮತ್ತು ನಿರ್ವಾಹಕ ವಾಹನದಲ್ಲಿ ಲಭ್ಯವಿದ್ದ ಅಗ್ನಿ ನಂದಕ ಮತ್ತು ಅಗ್ನಿ ಶಾಮಕದಳದ ಸಹಾಯದಿಂದ ಬೆಂಕಿಯನ್ನು ನಂದಿಸುವಲ್ಲಿ ಯಶ್ವಿಯಾಗಿದ್ದಾರೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಎಂಟಿಸಿಯಲ್ಲಿ ಲೇಲ್ಯಾಂಡ್ ಸಂಸ್ಥೆಯ 16 ವಿವಿಧ ಮಾದರಿಯ ವಾಹನಗಳಿವೆ. ಅಶೋಕ್ ಲೇಲ್ಯಾಂಡ್ ತಯಾರಿಕೆಯ ಬಿ.ಎಸ್ 4 ಮಾದರಿಯ ಬಸ್‌ಗಳು ಬೆಂಕಿ ಅವಘಡಕ್ಕೆ ಒಳಗಾಗುತ್ತಿವೆ. ಒಟ್ಟು 200 ಬಸ್‌ಗಳು ಬೆಂಕಿ ಅನಾಹುತಕ್ಕೆ ಒಳಗಾಗಿವೆ. ಅವೆಲ್ಲವೂ ಲೇಲ್ಯಾಂಡ್ ಬಿ.ಎಸ್ 4 ಮಾದರಿಯದ್ದಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇಂದು ನಡೆದ ಘಟನೆಯಲ್ಲಿ ವಾಹನದ ಸ್ಟಾರ್ಟರ್ ಬಳಿ ಹೊಗೆ ಕಾಣಿಸಿಕೊಂಡಿತ್ತು. ಸ್ಟಾರ್ಟರ್ ಮತ್ತು ವೈರಿಂಗ್ ವಿನ್ಯಾಸದಲ್ಲಿನ ನ್ಯೂನ್ಯತೆಯ ಕಾರಣದಿಂದಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಲೇಲ್ಯಾಂಡ್ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಪ್ರತಿನಿಧಿಗಳಿಗೆ ಸ್ಟಾರ್ಟರ್ ಮತ್ತು ವೈರಿಂಗ್ ವಿನ್ಯಾಸದಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಿಕೊಡಲು ತಿಳಿಸಲಾಗಿದೆ. ಈ ಅವಘಡದಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ಬಿಎಂಟಿಸಿ ಹೇಳಿದೆ.
ಇದನ್ನೂ ಓದು:ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಬಿಎಂಟಿಸಿ ಬಸ್ಗೆ ಬೆಂಕಿ; ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡು