ಬೆಂಗಳೂರು: ಸ್ಥಗಿತಗೊಂಡಿರುವ 'ಬಸ್ ಡೇ' ಯೋಜನೆಯನ್ನು ಮರಳಿ ಆರಂಭಿಸಲಾಗುತ್ತದೆ ಎಂದು ಬಿಎಂಟಿಸಿಯ ನೂತನ ಅಧ್ಯಕ್ಷ ನಂದೀಶ್ ರೆಡ್ಡಿ ತಿಳಿಸಿದರು.
ಪ್ರತಿ ತಿಂಗಳ 4ನೇ ತಾರೀಖಿನಂದು ಆಚರಿಸಲಾಗುವ ಬಸ್‌ಡೇ ದಿನದಂದು ಅಧಿಕಾರಿಗಳು, ಜನಪ್ರತಿನಿಧಿಗಳು ಸರ್ಕಾರಿ ಬಸ್ನಲ್ಲೇ ಕಚೇರಿಗೆ ತೆರಳುವ ಮೂಲಕ ಸಾರ್ವಜನಿಕರಿಗೆ ಸಾರಿಗೆ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದರು. ಮಹಾನಗರದಲ್ಲಿ ಸಂಚಾರ ದಟ್ಟಣೆ ಇದೆ. ಸಾರ್ವಜನಿಕರು ಸಾರಿಗೆ ಬಳಸಿದರೆ ಸಂಚಾರ ಹಾಗೂ ಪರಿಸರವನ್ನು ಒಳ್ಳೆಯ ದಿಕ್ಕಿನತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಹೇಳಿದ್ರು.
ಇನ್ನು ನಗರದ ರಸ್ತೆಗಳಲ್ಲಿ ಬಸ್ ಪಥವನ್ನು ಅಳವಡಿಸುವುದು ಅತಿದೊಡ್ಡ ಸವಾಲಾಗಿದ್ದು, ಎಲ್ಲರೂ ಕೈ ಜೋಡಿಸಿ ಯೋಜನೆ ಯಶಸ್ವಿಯಾಗಿಸಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.ಇದರ ಜೊತೆಯಲ್ಲಿ ವಿದ್ಯುತ್ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ಸಿಎಂ ಜೊತೆ ಮಾತುಕತೆ ನಡೆಸುವುದಾಗಿಯೂ ನೂತನ ಅಧ್ಯಕ್ಷರು ತಿಳಿಸಿದರು.
ಬಿಎಂಟಿಸಿಯ ನೂತನ ಅಧ್ಯಕ್ಷ ನಂದೀಶ್ರೆಡ್ಡಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಬಿಎಂಟಿಸಿಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲ್ಲ ಎಂದು ಖಚಿತಪಡಿಸಿದರು.
ಪರಿಸರ ಉಳಿಸುವ ದೀರ್ಘಾವಧಿ ವಿದ್ಯುತ್ ಬಸ್ ಯೋಜನೆಗೆ ಮುಂದಾಗಿದ್ದು, ಒಂದು ವಿದ್ಯುತ್ ಬಸ್‌ಗೆ ಒಂದೂವರೆ ಕೋಟಿ ರೂ ಖರ್ಚಾಗಲಿದೆ. ಅಷ್ಟು ಹಣವನ್ನು ಭರಿಸುವ ಶಕ್ತಿ ಸಂಸ್ಥೆಗೆ ಇಲ್ಲ. ಹಾಗಾಗಿ ಲೀಸ್ ಆಧಾರದಲ್ಲಿ ಬಸ್‌ಗಳನ್ನು ಪಡೆಯಲಿದ್ದೇವೆ ಎಂದು ತಿಳಿಸಿದರು. ನನ್ನ ಅಧಿಕಾರಾವಧಿಯಲ್ಲಿ ನೈರುತ್ಯ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮಕ್ಕೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಎಲ್ಲಾ ನಿಗಮಕ್ಕೂ ತೆರಿಗೆ ವಿನಾಯಿತಿ ಕಲ್ಪಿಸಬೇಕು ಆಗ ಸಂಸ್ಥೆಗಳ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಸಚಿವರು ವಿವರಿಸಿದ್ರು.
ಇದಕ್ಕೂ ಮುನ್ನ ಬಿಎಂಟಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂದೀಶ್ ರೆಡ್ಡಿ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಗೆ ತಮ್ಮ ಕ್ಷೇತ್ರದಿಂದ ಸಾರಿಗೆ ಬಸ್ನಲ್ಲೇ ಆಗಮಿಸಿದ್ದರು. ನಂತರ ಅಧ್ಯಕ್ಷರ ಕೊಠಡಿಯಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು.
ಶಾಸಕ ಸತೀಶ್ ರೆಡ್ಡಿ , ಸಂಸದ ತೇಜಸ್ವಿ ಸೂರ್ಯ ಈ ವೇಳೆ ಉಪಸ್ಥಿತರಿದ್ದರು.