ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಕ್ಷರಶಃ ಮುಳುಗುವ ಹಡಗಿನಂತಾಗಿದೆ. 2 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ. ಸರ್ಕಾರ ದೊಡ್ಡ ಮನಸ್ಸು ಮಾಡಿ ನೆರವಿಗೆ ಧಾವಿಸದಿದ್ದರೆ ಬಿಎಂಟಿಸಿ ಪರಿಸ್ಥಿತಿ ಶೋಚನೀಯವಾಗಲಿದೆ ಎಂದು ತಿಳಿದುಬಂದಿದೆ.
ಖಾಸಗೀಕರಣ ಅಥವಾ ಮುಚ್ಚುವ ಭೀತಿಗೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ. ಇದರ ದುಷ್ಪರಿಣಾಮಕ್ಕೆ ಕಾರ್ಮಿಕರು ತುತ್ತಾಗುತ್ತಿರುವುದು ವಿಪರ್ಯಾಸ ಎನ್ನಲಾಗುತ್ತಿದೆ. ತಿಂಗಳ ಮೊದಲ ವಾರದಲ್ಲಿ ಕಾರ್ಮಿಕರಿಗೆ ಸಂಬಳ ಭತ್ಯೆ ಸಿಗುತ್ತಿದ್ದ ಪರಿಸ್ತಿತಿ ಈಗ ಇಲ್ಲವಾಗಿದೆ. ಕಳೆದ ಕೆಲ ತಿಂಗಳಿಂದ ಕಾರ್ಮಿಕರಿಗೆ ಭತ್ಯೆ ಇಲ್ಲ. ತಿಂಗಳ ಸಂಬಳ ನಿಯಮಿತವಾಗಿ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಂಪ್ರದಾಯ ಜೂನ್ ತಿಂಗಳು ಸಹ ಮುಂದುವರೆಯಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು ತಿಳಿಸಿದ್ದಾರೆ.
ಖಜಾನೆಯಲ್ಲಿ ದುಡ್ಡಿಲ್ಲ: ಆಡಳಿತ ಮಂಡಳಿಯೇ ಈ ಬಾರಿ ಬಿಎಂಟಿಸಿ ಕಾರ್ಮಿಕರಿಗೆ ಸಂಬಳ ಕೊಡುವುದಕ್ಕೆ ಖಜಾನೆಯಲ್ಲಿ ದುಡ್ಡಿಲ್ಲ ಎನ್ನುವ ಅಸಹಾಯಕತೆ ತೋಡಿಕೊಂಡಿದೆ. ದಿನಂಪ್ರತಿ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿರುವ ಪ್ಯಾಸೆಂಜರ್ಸ್ಗಳ ಸಂಖ್ಯೆ ಕ್ರಮೇಣ ಸುಧಾರಣೆಯಾಗುತ್ತಿದೆ. ಬಿಎಂಟಿಸಿಗಳಿಕೆಯೂ ಹಳಿಗೆ ಬರುತ್ತಿದೆ. ಎಲ್ಲವೂ ಸರಿಯಾಗಿರುವಾಗ ಸಂಬಳ ಕೊಡುವುದಕ್ಕೆ ಏನು ತೊಂದರೆ ಎಂದು ಸಿಬ್ಬಂದಿ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರ್ಥಿಕ ಅಶಿಸ್ತಿನ ಪ್ರಭಾವ: ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದ ಅವ್ಯವಸ್ಥೆಯ ಪರಿಣಾಮವಾಗಿ 'ಆರ್ಥಿಕ ಅಶಿಸ್ತಿ'ನ ಪ್ರಭಾವ ಈಗಲೂ ಮುಂದುವರೆದುಕೊಂಡು ಬಂದಿದೆ. ಹಾಗಾಗಿ ಎಲ್ಲವೂ ಸರಿಯಾಗುತ್ತಿರುವಾಗಲೇ ಆರ್ಥಿಕ ಹೊಡೆತದ ಕಾರಣಕ್ಕೆ ಸಂಬಳದ ದಿನಾಂಕದಲ್ಲೂ ಏರುಪೇರಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.