ಬೆಂಗಳೂರು :ಮಹಿಳಾ ಕಂಡಕ್ಟರ್ ಹಾಗೂ ಡ್ರೈವರ್ ಜೊತೆ ಪ್ರಯಾಣಿಕರ ಅಸಭ್ಯ ವರ್ತನೆ ಹಾಗೂ ಗಲಾಟೆ ಕುರಿತು ದೂರು ಬಂದ ಹಿನ್ನೆಲೆ ತನ್ನ ಸಿಬ್ಬಂದಿಯ ರಕ್ಷಣೆಗೆ ಮುಂದಾಗಿರುವ ಬಿಎಂಟಿಸಿ ರಕ್ಷಣಾ ಕಲೆಯನ್ನು ಕಲಿಸುತ್ತಿದೆ.
ಕರಾಟೆ ಪಟುಗಳಾದ ಬಿಎಂಟಿಸಿ ಮಹಿಳಾ ಸಿಬ್ಬಂದಿ ಮಹಿಳಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಲು ಬಿಎಂಟಿಸಿ ಸ್ಮಾರ್ಟ್ ಪ್ಲಾನ್ ಮಾಡಿದೆ. ಬಿಎಂಟಿಸಿ ಮಹಿಳಾ ಡ್ರೈವರ್ ಹಾಗೂ ಕಂಡಕ್ಟರ್ಗಳು ಕರಾಟೆ ಪಟುಗಳಾಲಿದ್ದಾರೆ. ಇದಕ್ಕಾಗಿ ಈಗಾಗಲೇ 50 ಜನರನ್ನೊಳಗೊಂಡ ಫಿಟ್ ಅಂಡ್ ಫೈನ್ ಮಹಿಳಾ ತಂಡವನ್ನ ಟ್ರೈನ್ ಮಾಡಲಾಗುತ್ತಿದೆ.
ಬೆಂಗಳೂರಿನ ಶಾಂತಿನಗರ ಕೇಂದ್ರ ಕಚೇರಿಯಲ್ಲಿ ನುರಿತ ತಜ್ಞರಿಂದ ಲೆಗ್ ಕಿಕ್, ಫೇಸ್ ಕಿಕ್ ಸೇರಿದಂತೆ ನಾನಾ ಬಗೆಯ ಟ್ರೈನಿಂಗ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಮಹಿಳಾ ಸಿಬ್ಬಂದಿಗೆ ಈ ತರಬೇತಿ ನೀಡಲಾಗುತ್ತಿದೆ ಎಂದು ಬಿಎಂಟಿಸಿ ಭದ್ರತಾ ಹಾಗೂ ಜಾಗೃತ ದಳದ ನಿರ್ದೇಶಕ ಅರುಣ್ ತಿಳಿಸಿದರು.
ಮೊದಲ ತಂಡದ ಮಹಿಳಾ ಸಿಬ್ಬಂದಿ ಸಂಪೂರ್ಣ ತಯಾರಿ ಆದ ನಂತರ ಪ್ರತಿ ಡಿಪೋಗಳಿಗೆ ತೆರಳಿ ಅಲ್ಲಿರುವ ಮಹಿಳಾ ಸಿಬ್ಬಂದಿಗೆ ಹೇಳಿಕೊಡಬೇಕು. ಸುಮಾರು 3000 ಸಿಬ್ಬಂದಿ ಇದ್ದು, ಅವರಿಗೆಲ್ಲ ಸ್ವಯಂರಕ್ಷಣೆಯ ಪಾಠ ಮಾಡಲಾಗುತ್ತೆ.
21 ದಿನಗಳು, ದಿನಕ್ಕೆ 2 ತಾಸಿನಂತೆ ತರಗತಿಗಳು ನಡೆಯಲಿವೆ. ಈ ಮೂಲಕ ದೈನಂದಿನ ಜೀವನದಲ್ಲಿ ಎದುರಿಸಬಹುದಾದ ಬೆದರಿಕೆ, ಸರಳ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಚಲನಗಳ ಮೂಲಕ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳಬಹುದು.