ಬೆಂಗಳೂರು :ವಿಶ್ವವ್ಯಾಪಿ ಆರ್ಭಟಿಸುತ್ತಿರುವ ಕೋವಿಡ್-19 ಹಲವಾರು ಕ್ಷೇತ್ರಗಳಿಗೆ ದೊಡ್ಡ ಹೊಡೆತ ಕೊಟ್ಟಿದೆ. ಆದರೆ, ಕೊರೊನಾ ನಡುವೆಯೂ ಸಹ ನಗರದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಮಾತ್ರ ಅದಕ್ಕೆ ಅಪವಾದವೆಂಬಂತಹ ಸಾಧನೆ ಮಾಡಿ ತೋರಿಸಿದೆ.
ಬಿಎಂಎಸ್ ಸಂಸ್ಥೆಯು ಲಾಕ್ಡೌನ್ ಹಿನ್ನೆಲೆ ರಜೆ ಘೋಷಿಸಿದ್ದರೂ ಕ್ಯಾಂಪಸ್ ಆಯ್ಕೆಯಿಂದ ವಿದ್ಯಾರ್ಥಿಗಳು ವಂಚಿತರಾಗದಂತೆ ನೋಡಿಕೊಂಡಿದೆ. 1000 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಕೊರೊನಾ ನಡುವೆಯು ಪ್ಲೇಸ್ಮೆಂಟ್ ಸೆಲ್ ಆನ್ಲೈನ್ ಕ್ಯಾಂಪಸ್ ಕೈಗೊಳ್ಳುವ ಮೂಲಕ ಅಚ್ಚರಿ ಎನ್ನುವಂತಹ ಸಾಧನೆ ಮಾಡಿದೆ. ಪ್ಲೇಸ್ಮೆಂಟ್ ಸೆಲ್ ಕ್ಯಾಂಪಸ್ ಆಯ್ಕೆ ಆರಂಭವಾಗುವ ಮೊದಲು ಪೂರ್ವ ಪ್ಲೇಸ್ಮೆಂಟ್ ತರಬೇತಿ ಕಾರ್ಯಕ್ರಮ ಕೈಗೊಂಡು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಸರಾಗವಾಗಿ ತೇರ್ಗಡೆಯಾಗುವಂತೆ ಕಾಲೇಜು ವತಿಯಿಂದ ಸಜ್ಜುಗೊಳಿಸಲಾಗಿತ್ತು. ಈ ನಡುವೆ ಕ್ಯಾಂಪಸ್ ಆಯ್ಕೆ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಲಾಕ್ಡೌನ್ ಘೋಷಣೆಯಾಗಿತ್ತು.