ಬೆಂಗಳೂರು : ಕೋವಿಡ್ ಹಿನ್ನೆಲೆ ನಮ್ಮ ಮೆಟ್ರೋ ಸೇವೆ ಸುಮಾರು ಎರಡು ತಿಂಗಳು ಸ್ಥಗಿತಗೊಂಡಿತ್ತು. ಅನ್ ಲಾಕ್ ಬಳಿಕ ಹಂತ ಹಂತವಾಗಿ ಮೆಟ್ರೋ ಓಡಾಟ ಪುನಾರಂಭವಾಗಿದೆ. ಸೋಂಕು ಹರಡುವ ಭೀತಿ ಹಿನ್ನೆಲೆ ಕೇವಲ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು. ಈಗ ಟೋಕನ್ ವ್ಯವಸ್ಥೆ ಪುನಾರಂಭಿಸಲು ಬಿಎಂಆರ್ಸಿಎಲ್ ನಿರ್ಧಾರ ಮಾಡಿದೆ.
ಬಿಎಂಅರ್ಸಿಎಲ್ನ ಈ ನಿಯಮಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಪ್ರಯಾಣಿಕರ ಒತ್ತಡಕ್ಕೆ ಮಣಿದಿರುವ ಬಿಎಂಆರ್ಸಿಎಲ್ ನಾಳೆಯಿಂದ ಪೂರ್ಣ ಪ್ರಮಾಣದಲ್ಲಿ ಮೆಟ್ರೋ ಓಡಿಸಲು ತೀರ್ಮಾನಿಸಿದೆ. ಪ್ರಸ್ತುತ ಸಂಜೆ 7 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುವ ಕಾರಣ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ತನಕ ಮೆಟ್ರೋ ಓಡಾಟ ಇರಲಿದೆ.
ಇಂದಿನವರೆಗೆ ಬೆಳಗ್ಗೆ 7 ರಿಂದ 11 ಗಂಟೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯ ತನಕ ಮಾತ್ರ ಮೆಟ್ರೋ ಸೇವೆ ಇತ್ತು. ಗುರುವಾರದಿಂದ ಶಿಫ್ಟ್ ಲೆಸ್ ಸಂಚಾರ ಇರಲಿದೆ.
ಸ್ಮಾಟ್ ಕಾರ್ಡ್ ಜೊತೆಗೆ ಟೋಕನ್ ವ್ಯವಸ್ಥೆ: ಕೋವಿಡ್ ಆವರಿಸಿಕೊಂಡಾಗಿದ್ದ, ಅಂದರೆ ಕಳೆದ ಒಂದೂವರೆ ವರ್ಷದಿಂದ ಮೆಟ್ರೋದಲ್ಲಿ ಟೋಕನ್ ಟೆಕೆಟಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಸೋಂಕು ಹರಡದಂತೆ ತಡೆಯುವ ಸಲುವಾಗಿ ಕೇವಲ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಟೋಕನ್ ವ್ಯವಸ್ಥೆಯನ್ನು ಪುನಾರಂಭಿಸುವಂತೆ ಪ್ರಯಾಣಿಕರಿಂದ ಒತ್ತಡ ಬರುತ್ತಿದೆ. ಹಾಗಾಗಿ, ಟೋಕನ್ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ನಿಯಮ ಪಾಲನೆ ಹೆಸರಿಗಷ್ಟೆ?ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿರುವುದಿಂದ ಕೋವಿಡ್ ನಿಯಮ ಕೇವಲ ಬಾಯಿ ಮಾತಿಗಷ್ಟೇ ಎಂಬಂತಾಗಿದೆ. ಸಾಮಾಜಿಕ ಅಂತರ ಕಾಪಾಡದೆ ಜನರು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಮೂರು ಬೋಗಿ ರೈಲಿನಲ್ಲಿ 350 ರಿಂದ 400 ಜನರಿಗೆ ಮಾತ್ರ ಪ್ರಯಾಣಿಸಲು ಅನುಮತಿ ಇದೆ.
ಆರು ಬೋಗಿಯ ರೈಲಿನಲ್ಲಿ 800 ರಿಂದ 850 ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಎರಡು ಶಿಫ್ಟ್ನಲ್ಲಿ ಮೆಟ್ರೋ ಓಡಾಟ ಹಿನ್ನೆಲೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಇದೀಗ ಸಮಯ ವಿಸ್ತರಣೆ ಮಾಡಿರುವುದರಿಂದ ಸಮಸ್ಯೆ ಬಗೆಹರಿಯಲಿದೆ.
ಓದಿ : ಏಳು IAS ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ