ಬೆಂಗಳೂರು: 'ನಮ್ಮ ಮೆಟ್ರೋ ರೈಲು ಯೋಜನೆ’ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲು ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು’ (ಐಐಎಂ-ಬಿ) ಸಂಸ್ಥೆಯನ್ನು ನೇಮಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಕುರಿತು ನಗರದ ಪರಿಸರವಾದಿ ಡಿ.ಟಿ.ದೇವರೆ ಹಾಗೂ ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.
ಬಿಎಂಆರ್‌ಸಿಎಲ್ ಪರ ವಕೀಲ ಬಸವರಾಜ ಸಬರದ ಮೆಮೊ ಸಲ್ಲಿಸಿ, ‘ನಮ್ಮ ಮೆಟ್ರೋ ರೈಲು ಯೋಜನೆ’ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸಿರುವ ಕುರಿತಂತೆ ಪರಿಶೀಲಿಸಲು ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಬೆಂಗಳೂರು’ (ಐಐಎಂ-ಬಿ) ಸಂಸ್ಥೆಯನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೆಮೊ ದಾಖಲಿಸಿಕೊಂಡಿರುವ ಪೀಠ, ಐಐಎಂ-ಬಿ ನೇಮಕಕ್ಕೆ ಒಪ್ಪಿಗೆ ಸೂಚಿಸಿದ್ದು, ಈ ಸಂಬಂಧ ಕಾರ್ಯಾದೇಶ ಹೊರಡಿಸುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶಿದೆ. ಜೊತೆಗೆ 10 ವಾರಗಳಲ್ಲಿ ವರದಿ ಸಲ್ಲಿಸುವಂತೆ ಐಐಎಂ-ಬಿಗೆ ಸೂಚಿಸಿ ವಿಚಾರಣೆಯನ್ನು ಜೂ. 18ಕ್ಕೆ ಮುಂದೂಡಿದೆ.