ಬೆಂಗಳೂರು: ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದಕ್ಕೆ ಆಡಳಿತಾರೂಢ ಬಿಜೆಪಿ ಸದ್ಸ್ಯ ಹೆಚ್.ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ರಾಜ್ಯ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದದಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಒಟ್ಟು ಮಂಜೂರಾದ ಹುದ್ದೆಗಳ ಕುರಿತು ಸದಸ್ಯ ಶ್ರೀಕಂಠೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಶಂಕರ್, ಕೊರೊನಾ ಕಾರಣದಿಂದ ಮುಂದಿನ ಆದೇಶದವರೆಗೆ ಖಾಲಿ ಹುದ್ದೆ ಭರ್ತಿಗೆ ತಡೆ ನೀಡಲಾಗಿತ್ತು. ಈಗಾಗಲೇ ಆರ್ಥಿಕ ಇಲಾಖೆಗೆ ವರದಿ ಕೊಟ್ಟಿದ್ದೇವೆ. ಆದಷ್ಟು ಬೇಗ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಓದಿ: ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆ ಅನುದಾನ ಬಿಡುಗಡೆಗೆ ತಡೆ: ಡಿಸಿಎಂ ಗೋವಿಂದ ಕಾರಜೋಳ
ಈ ವೇಳೆ ಕೆಲವು ಕೃಷಿ ಸಂಶೋಧನಾ ಕೇಂದ್ರಗಳು ಬೇಕು. ಆದರೆ, ಕೆಲವನ್ನು ಆ್ಯಕ್ಷನ್ ಮಾಡಿ ಗುತ್ತಿಗೆ ಆಧಾರದಲ್ಲಿ ನೀಡಬಹುದು ಎನ್ನುವ ಸಲಹೆ ನೀಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದರು. ಇಡೀ ದೇಶವನ್ನೇ ಮಾರಿದ್ದಾರೆ, ಈಗ ನೀವು ಆಕ್ಷನ್ ಮಾಡಿ ಅಂದರೆ ಖುಷಿಯಿಂದ ಮಾರುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಶಂಕರ್, ನಾವು ಯಾವುದನ್ನೂ ಮಾರಾಟ ಮಾಡಲ್ಲ, ನಾವು ರೈತರ ಪರ ಇದ್ದೇವೆ ಎಂದು ಚರ್ಚೆಗೆ ತೆರೆ ಎಳೆದರು.
ವಿಶ್ವನಾಥ್ ಕ್ಲಾಸ್:
ಈ ವೇಳೆ ಮಾತನಾಡಿದ ಆಡಳಿಯ ಪಕ್ಷದ ಸದಸ್ಯ ಹೆಚ್.ವಿಶ್ವನಾಥ್, ಕೇವಲ ತೋಟಗಾರಿಕೆ ಮಾತ್ರ ಅಲ್ಲ ಎಲ್ಲ ಇಲಾಖೆಗಳ ಪರಿಸ್ಥಿತಿ ಕೂಡ ಇದೇ ಆಗಿದೆ. ಶೇ. 55-60ರಷ್ಟು ನೌಕರರು ಇಲ್ಲ, ಹೈದರಾಬಾದ್ ಕರ್ನಾಟಕದಲ್ಲಿ 22 ಹುದ್ದೆ ಮಂಜೂರಾತಿಯಾದರೆ, 15 ಖಾಲಿ ಹುದ್ದೆ ಇವೆ. ಬೀದರ್ನಲ್ಲಿ ಮಂಜೂರಾತಿ 56, ಖಾಲಿ 54 ಇವೆ. ಕೊಪ್ಪಳದಲ್ಲಿ ಮಂಜೂರಾತಿ 22, ಖಾಲಿ 16, ಬಳ್ಳಾರಿಯಲ್ಲಿ ಮಂಜೂರಾತಿ 23, ಖಾಲಿ ಹುದ್ದೆ 17 ಇವೆ. 371 ಜೆಗೆ ಸಾಕಷ್ಟು ಹೋರಾಟ ಮಾಡಿದ್ದು, ಏನಾಯ್ತು ಎಂದು ಪ್ರಶ್ನಿಸಿದರು. 2.70 ಲಕ್ಷ ನೌಕರರು ಹೊರ ಗುತ್ತಿಗೆಗೆ ಇದ್ದಾರೆ. ಕೂಡಲೇ ಹುದ್ದೆ ಭರ್ತಿ ಮಾಡಬೇಕು. ಸರ್ಕಾರದ ಯಂತ್ರವೇ ಸಿಬ್ಬಂದಿ, ಅದೇ ಇಲ್ಲದಿದ್ದರೆ ಯಂತ್ರ ನಡೆಯುವುದು ಹೇಗೆ ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಎಸ್.ಆರ್.ಪಾಟೀಲ್ ಕ್ಲಾಸ್:
ಬೀದರ್ ಜಿಲ್ಲೆಯ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು ಸದಸ್ಯ ಅರವಿಂದ ಕುಮಾರ್ ಅರಳಿ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಶಂಕರ್, ಕೇವಲ ರೇಷ್ಮೆ ಇಲಾಖೆ ಮಾತ್ರವಲ್ಲ ಎಲ್ಲ ಇಲಾಖೆಯಲ್ಲಿಯೂ ಹುದ್ದೆ ಖಾಲಿ ಇವೆ. ಹಣಕಾಸು ಇಲಾಖೆ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು .
ಇದಕ್ಕೆ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆಕ್ಷೇಪ ವ್ಯಕ್ತಪಡಿಸಿದರು. ಹಣಕಾಸು ಇಲಾಖೆ ಜೊತೆ ಮಾತುಕತೆ ನಡೆಸಿ ಅವರು ಒಪ್ಪಿದರೆ ಮಾಡುತ್ತೇವೆ ಎನ್ನುತ್ತೀರಿ. ಹಣಕಾಸು ಇಲಾಖೆ ಅನುಮತಿ ಕೊಡದಿದ್ದರೆ ನೇಮಕಾತಿ ಮಾಡಿಕೊಳ್ಳುವುದಿಲ್ಲವೇ ಎಂದರು.
ಸಚಿವರ ನೆರವಿಗೆ ಧಾವಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಚಿವರು ಹೊಸಬರಿದ್ದಾರೆ. ಫೆ. 6ರಂದು ಅಧಿಕಾರಿಗಳ ಸಭೆ ಇದೆ, ಮಾತನಾಡುತ್ತೇನೆ. ನಂತರ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಹಾಗಾಗಿ ಸಹಕಾರ ಕೊಡಿ ಎಂದು ಮನವಿ ಮಾಡಿ ಚರ್ಚೆಗೆ ತೆರೆ ಎಳೆದರು.