ಕರ್ನಾಟಕ

karnataka

ETV Bharat / state

ನೆಲಮಂಗಲದಲ್ಲಿ ನರಬಲಿ ಯತ್ನ: 10 ವರ್ಷದ ಬಾಲಕಿಯ ಮೇಲೆ ವಾಮಾಚಾರ - Nelamangala Black magic news

ಬಾಲಕಿಯೊಬ್ಬಳಿಗೆ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಕಿ ಮಾಂತ್ರಿಕನೊಬ್ಬ ಕ್ಷುದ್ರ ಪೂಜೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಬಾಲಕಿಯನ್ನು ನರಬಲಿ ಕೊಡಲು ಸಿದ್ಧತೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Black magic in Nelamangala
10 ವರ್ಷದ ಬಾಲಕಿಯ ಮೇಲೆ ವಾಮಾಚಾರ

By

Published : Jun 20, 2021, 12:30 PM IST

Updated : Jun 20, 2021, 12:53 PM IST

ನೆಲಮಂಗಲ:ಮನೆ ಮುಂದೆ ಆಟ ಆಡುತ್ತಿದ್ದ 10 ವರ್ಷದ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ ಬಲಿ ನೀಡಲು ಯತ್ನಿಸಿರುವ ಅಮಾನವೀಯ ಘಟನೆ ನೆಲಮಂಗಲದಲ್ಲಿ ನಡೆದಿದೆ. ಇಲ್ಲಿನ ಸೋಲದೇವನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗಾಂಧಿ ಗ್ರಾಮದಲ್ಲಿ ಜೂನ್ 14 ರಂದು ದೇವರ ಪೂಜೆ ಹೆಸರಿನಲ್ಲಿ ಬಾಲಕಿಯ ಮೇಲೆ ವಾಮಾಚಾರ ಮಾಡಿದ್ದು, ಬಲಿ ನೀಡಲು ಸಹ ಯತ್ನಿಸಲಾಗಿದೆ.

ನೆಲಮಂಗಲದಲ್ಲಿ ನರಬಲಿ ಯತ್ನ

ಗ್ರಾಮದ ನಿವಾಸಿ ಮಂಜುನಾಥ್ ಮತ್ತು ಮಾಲ ಎಂಬವರ ಮಗಳನ್ನು ಅದೇ ಗ್ರಾಮದ ಸುರೇಶ್, ಹನುಮಂತಯ್ಯ, ಶಿವರಾಜು, ರವಿ, ಸೌಮ್ಯ ಸೇರಿದಂತೆ ಮಾಂತ್ರಿಕನೊಬ್ಬ ಅಪಹರಿಸಿದ್ದು, ಹೊಲವೊಂದರಲ್ಲಿ ನರಬಲಿಗೆ ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮನೆಯ ಮುಂದೆ ಆಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ಹೊಲದಲ್ಲಿನ ಗುಡಿಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು ಹಾಕಿ ಮಾಂತ್ರಿಕನೊಬ್ಬ ಕ್ಷುದ್ರ ಪೂಜೆ ಮಾಡಿದ್ದಾನೆ. ಬಳಿಕ ಬಲಿ ಪೂಜೆ ನಡೆಸಲಾಗಿದೆ. ಮನೆಯ ಬಳಿ ಬಾಲಕಿ ಕಾಣದಿದ್ದಾಗ ಕುಟುಂಬದವರು ಹುಡುಕಲು ಆರಂಭಿಸಿದ್ದರು.

ಆಗ ಗುಡಿಯ ಬಳಿ ಬಾಲಕಿ ಪತ್ತೆಯಾಗಿದ್ದು, ವಾಮಾಚಾರಿಗಳಿಂದ ಬಾಲಕಿಯ ಪ್ರಾಣ ರಕ್ಷಣೆ ಮಾಡಿದ್ದಾರೆ. ಬಾಲಕಿಯನ್ನು ನರಬಲಿ ಕೊಡಲು ಸಿದ್ಧತೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕಿ ಕುಟುಂಬಸ್ಥರು ದುಷ್ಟಪದ್ಧತಿ ಹಾಗೂ ವಾಮಾಚಾರ ನಿರ್ಮೂಲನೆ ಕಾಯ್ದೆಯಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನರಬಲಿಗೆ ಯತ್ನಿಸಿದ ಮಾಂತ್ರಿಕ ಸೇರಿ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Last Updated : Jun 20, 2021, 12:53 PM IST

ABOUT THE AUTHOR

...view details