ಬೆಂಗಳೂರು:ಒಂದೆಡೆಕೊರೊನಾ 2ನೇ ಅಲೆಯಿಂದ ಕಂಗೆಟ್ಟು ಹೋಗಿರುವ ಜನರು ಔಷಧಿ ಸಿಗದೇ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗಾಗಿ ಶೇಖರಿಸಿಟ್ಟಿದ್ದ ಔಷಧಿಯ 10 ವೈಯಲ್ಸ್ ಕಳ್ಳತನವಾಗಿವೆ.
ವಿಕ್ಟೋರಿಯಾ ಆಸ್ಪತ್ರೆಯ ಆರ್.ಎಂ.ಒ ಆದ ಡಾ. ಶ್ರೀನಿವಾಸ್ ದೂರಿನ ಆಧಾರದ ಮೇಲೆ ವಿ.ವಿ ಪುರ ಪೊಲೀಸರು ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಕಳವು ಕೇಸ್ ದಾಖಲು ಮಾಡಲಾಗಿದೆ. ಡ್ಯೂಟಿ ಮೇಲಿದ್ದ ನಾಲ್ವರು ವೈದ್ಯರನ್ನು ವಿಚಾರಣೆ ನಡೆಸಲು ತೀರ್ಮಾನಿಸಿದ್ದೇವೆ. ಸದ್ಯ ಅಸ್ಪತ್ರೆಯ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಯುತ್ತಿದೆ ಎಂದು ವಿ.ವಿ ಪುರ ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿನ ಮಾಹಿತಿಯಂತೆ ತಾಂತ್ರಿಕ ತನಿಖೆ ಮೊರೆ ಹೋಗಿರುವ ಪೊಲೀಸರು ಡ್ಯೂಟಿ ಡಾಕ್ಟರ್ಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಿದೆ. ವೈದ್ಯರ ಅನುಮತಿ ಇಲ್ಲದೆ ಔಷಧ ಹೊರ ತೆಗೆಯುವಂತಿಲ್ಲ. ಹೀಗಾಗಿ ವೈದ್ಯರ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರಕರಣದ ಪೂರ್ಣ ವಿವರ...
ವಿಕ್ಟೋರಿಯಾ ಆಸ್ಪತ್ರೆ ಎಂಪಿಬಿ ಕಟ್ಟಡದ ಕೋವಿಡ್ ವಾರ್ಡ್‌ನ 7ನೇ ಮಹಡಿಯಲ್ಲಿ ಮೇ 30ರಂದು ರಾತ್ರಿ 7.40ರಿಂದ 7.45ರ ನಡುವೆ ‘ಲಿಪೊಸೋಮಲ್ ಆಂಫೊಟೆರಿಸಿನ್ ಬಿ’-10 ವೈಯಲ್ಸ್ ಕಳುವಾಗಿದ್ದವು. ಕರ್ತವ್ಯದಲ್ಲಿದ್ದ ವೈದ್ಯರಾದ ಇ.ಎನ್.ಟಿ ತಜ್ಞೆ ಡಾ. ಸಹನಾ ಬಂದು ಪರಿಶೀಲಿಸಿದಾಗ ಈ ಸಂಗತಿ ಬೆಳಕಿಗೆ ಬಂದಿತ್ತು. ಕೂಡಲೇ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ವಿಕ್ಟೋರಿಯಾ ಇ.ಎನ್.ಟಿ ವಿಭಾಗದ ಮುಖ್ಯಸ್ಥ ಔಷಧ ಕಳುವಾಗಿರುವ ಬಗ್ಗೆ ಆರ್.ಎಂ.ಒ ಡಾ. ಶ್ರೀನಿವಾಸ್‌ಗೆ ಪತ್ರದ ಮೂಲಕ ಮಾಹಿತಿ ಕೊಟ್ಟಿದ್ದರು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಕಳವು ಮೇ 30ರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಇದ್ದ ಶಿಫ್ಟ್ನಲ್ಲಿ ಬಳಕೆ ಆಗದ ‘ಲಿಪೊಸೋಮಲ್ ಆಂಫೊಟೆರಿಸಿನ್ ಬಿ’-43 ಔಷಧಿಗಳಿದ್ದವು. ರಾತ್ರಿ 7.20ರಲ್ಲಿ ಇಂಟರ್ನ್ಶಿಪ್ ಮಾಡುತ್ತಿರುವ ಡಾ. ಪ್ರಣವ್, ಇ.ಎನ್.ಟಿ ಆಪ್ತೋಲೊಮಜಿ ವೈದ್ಯೆ ಡಾ. ಸಂಜನಾ ಹಾಗೂ ಸಿಬ್ಬಂದಿ ರಮೇಶ್ ಸಮ್ಮುಖದಲ್ಲಿ ಔಷಧಿಗಳಿದ್ದ ಲಾಕರ್ ಪರಿಶೀಲಿಸಲಾಗಿತ್ತು. ಆ ವೇಳೆ ಎಲ್ಲ ಔಷಧಿಗಳು ಸರಿಯಾಗಿ ಇದ್ದವು. ನಂತರ ಲಾಕರ್ ಕೀಯನ್ನು ನರ್ಸಿಂಗ್ ಸ್ಟೇಷನ್‌ನ ಮೇಜಿನ ಮೇಲೆ ಇಟ್ಟು ಹೋಗಿದ್ದೆವು. ಇದಾದ ಬಳಿಕ ಕರ್ತವ್ಯಕ್ಕೆ ಬಂದ ಡಾ. ಸಹನಾ ಔಷಧಿ ಕಳುವಾದ ಸಂಗತಿಯನ್ನು ಗಮನಕ್ಕೆ ತಂದಿದ್ದರು ಎಂಬ ಅಂಶವನ್ನು ಇ.ಎನ್.ಟಿ ವಿಭಾಗದ ಮುಖ್ಯಸ್ಥರು ಕೊಟ್ಟಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಡಾ. ಶ್ರೀನಿವಾಸ್ ನೀಡಿರುವ ದೂರಿನ ಮೂಲಕ ತಿಳಿದು ಬಂದಿದೆ.
ವೈದ್ಯರಿಂದಲೇ ಕೃತ್ಯ ಎಸಗಿರುವ ಬಗ್ಗೆ ಸಂಶಯ:
ಬ್ಲ್ಯಾಕ್ ಫಂಗಸ್ ಔಷಧ ಸಂಗ್ರಹಿಸಿಟ್ಟಿದ್ದ ಕೊಠಡಿಗೆ ಆಸ್ಪತ್ರೆ ವೈದ್ಯರಿಗೆ ಬಿಟ್ಟು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಈ ಔಷಧಿ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಇರುವ ಆಸ್ಪತ್ರೆ ವೈದ್ಯರು ಅಥವಾ ಸಿಬ್ಬಂದಿಯೇ ಕಳ್ಳತನ ನಡೆಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಕೆಲ ವೈದ್ಯರನ್ನು ಮಂಗಳವಾರವೇ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಘಟನೆ ಕುರಿತು ವಿ.ವಿ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.